ವಿಜಯವಾಣಿ ಸುದ್ದಿಜಾಲ ಧಾರವಾಡ
ಅತ್ಯಂತ ತುರುಸಿನಿಂದ ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘದ ತ್ರೈ ವಾರ್ಷಿಕ ಚುನಾವಣೆ ಫಲಿತಾಂಶ ಸೋಮವಾರ ಹೊರಬಿದ್ದಿದ್ದು, ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಚಂದ್ರಕಾಂತ ಬೆಲ್ಲದ ಆಯ್ಕೆಯಾಗಿದ್ದಾರೆ.
ಒಟ್ಟು 15 ಸ್ಥಾನಗಳಿಗೆ ನಡೆದ ಚುನಾವಣೆಗೆ 2 ಬಣಗಳು ಸ್ಪರ್ಧೆ ನಡೆಸಿದ್ದವು. ಆದರೆ ಮತದಾರರು ಮಾತ್ರ ಚಂದ್ರಕಾಂತ ಬೆಲ್ಲದ ಹಾಗೂ ಶಂಕರ ಹಲಗತ್ತಿ ನೇತೃತ್ವದ ತಂಡಕ್ಕೆ ಸಂಪೂರ್ಣ ಒಲವು ತೋರಿದ್ದರಿಂದ ಪಾಪು ಅಭಿಮಾನಿ ಬಳಗ ನಿರಾಸೆ ಅನುಭವಿಸುವಂತಾಗಿದೆ.
* ಫಲಿತಾಂಶದ ವಿವರ:
ಅಧ್ಯಕ್ಷ ಸ್ಥಾನಕ್ಕೆ ಚಂದ್ರಕಾಂತ ಬೆಲ್ಲದ, ಮೋಹನ ಲಿಂಬಿಕಾಯಿ, ಚಂದ್ರಶೇಖರ ರಾಯರ, ಹನುಮಾ ಗೋಗಿ ಸ್ಪರ್ಧಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಚಲಾವಣೆಯಾದ 4464 ಮತಗಳಲ್ಲಿ ಚಂದ್ರಕಾಂತ ಬೆಲ್ಲದ ಅತೀ ಹೆಚ್ಚು (2328) ಮತಗಳನ್ನು ಪಡೆದು 512 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಮೋಹನ ಲಿಂಬಿಕಾಯಿ 1816, ಹನುಮಾ ಗೋಗಿ 204 ಹಾಗೂ ಚಂದ್ರಶೇಖರ ರಾಯರ 39 ಮತಗಳನ್ನು ಪಡೆದಿದ್ದರೆ, 77 ಮತಗಳು ತಿರಸಗೊಂಡಿವೆ.
ಉಪಾಧ್ಯಕ್ಷ ಸ್ಥಾನಕ್ಕೆ ಸ್ಪಧಿರ್ಸಿದ್ದ ಡಾ. ಸಂಜೀವ ಕುಲಕರ್ಣಿ 2089 ಮತಗಳನ್ನು ಪಡೆದು ಶರಣಪ್ಪ ಕೊಟಗಿ (1349 ಮತ) ವಿರುದ್ಧ 740 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಕಾರ್ಯಾಧ್ಯಕ್ಷ ಸ್ಥಾನಕ್ಕೆ ಬಸವಪ್ರಭು ಹೊಸಕೇರಿ 3085 ಮತಗಳನ್ನು ಪಡೆದು ಸಮೀಪ ಸ್ಪರ್ಧಿ ಮನೋಜ ಪಾಟೀಲ (1296) ವಿರುದ್ಧ 1789 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಇನ್ನು ತೀವ್ರ ಕುತೂಹಲ ಮೂಡಿಸಿದ್ದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಶಂಕರ ಹಲಗತ್ತಿ (2488) ಸಮೀಪ ಸ್ಪರ್ಧಿ ಪ್ರಕಾಶ ಉಡಿಕೇರಿ (1929) ವಿರುದ್ಧ 559 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಸಹ ಕಾರ್ಯದರ್ಶಿ ಸ್ಥಾನಕ್ಕೆ ಸ್ಪರ್ಧೆ ನಡೆಸಿದ್ದ ಶಂಕರ ಕುಂಬಿ (2573) ಸಮೀಪ ಸ್ಪರ್ಧಿ ಮಾರ್ತಾಂಡಪ್ಪ ಕತ್ತಿ (1777) ವಿರುದ್ಧ 796 ಮತಗಳ ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.
ಇನ್ನು ಕಾರ್ಯಕಾರಿ ಸಮಿತಿ ಮಹಿಳಾ ಮೀಸಲು ಸ್ಥಾನಕ್ಕೆ ಸ್ಪರ್ಧಿಸಿದ್ದ ವಿಶ್ವೇಶ್ವರಿ ಹಿರೇಮಠ (2656) ಸಮೀಪದ ಡಾ. ರತ್ನಾಐರಸಂಗ (1391) ವಿರುದ್ಧ 1265 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದರೆ, ಎಸ್ಸಿ, ಎಸ್ಟಿ ಮೀಸಲು ಸ್ಥಾನಕ್ಕೆ ಪ್ರೊ. ಧನವಂತ ಹಾಜವಗೋಳ (1620) ಡಾ. ವಿಶ್ವನಾಥ ಚಿಂತಾಮಣಿ (1475) ವಿರುದ್ಧ 145 ಮತಗಳ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಉಳಿದಂತೆ ಕಾರ್ಯಕಾರಿ ಸಾಮಾನ್ಯ ಸ್ಥಾನಗಳಿಗೆ ಡಾ. ಶೈಲಜಾ ಅಮರಶೆಟ್ಟಿ (2762 ಮತ), ಶಿವಾನಂದ ಭಾವಿಕಟ್ಟಿ (2787), ಡಾ. ಜಿನದತ್ತ ಹಡಗಲಿ (2118), ಗುರು ಹಿರೇಮಠ (2028), ಡಾ. ಮಹೇಶ ಹೊರಕೇರಿ (2136), ವೀರಣ್ಣ ಒಡ್ಡೀನ (2616), ಪ್ರೊ. ಶಶಿಧರ ತೋಡಕರ (1936) ಆಯ್ಕೆಯಾಗಿದ್ದಾರೆ.
624 ಮತಗಳು ತಿರಸ್ಕೃತ: ಅಧ್ಯಕ್ಷ ಸ್ಥಾನಕ್ಕೆ ಚಲಾಯಿಸಿದ ಮತಗಳಲ್ಲಿ 77, ಉಪಾಧ್ಯಕ್ಷ 78, ಕೋಶಾಧ್ಯಕ್ಷ 65, ಕಾರ್ಯಾಧ್ಯಕ್ಷ 54, ಪ್ರಧಾನ ಕಾರ್ಯದರ್ಶಿ 39, ಸಹ ಕಾರ್ಯದರ್ಶಿ 53, ಕಾರ್ಯಕಾರಿ ಸಮಿತಿಯ ಮಹಿಳಾ ಮೀಸಲು 60 ಹಾಗೂ ಎಸ್ಸಿ, ಎಸ್.ಟಿ ಮೀಸಲು ಸ್ಥಾನಕ್ಕೆ 109, ಸಾಮಾನ್ಯ ಸ್ಥಾನ 89 ಸೇರಿ ಒಟ್ಟು 624 ಮತಗಳು ತಿರಸ್ಕೃತಗೊಂಡಿವೆ.