ಚಿಕ್ಕಮಗಳೂರು: ದೇಶದಲ್ಲಿ ಬದಲಾವಣೆ ಅಗತ್ಯವಾಗಿದ್ದು, ಕೋಮುವಾದಿ ರಾಜಕಾರಣ ದಿಕ್ಕರಿಸಿ ಸಂವಿಧಾನ ರಕ್ಷಿಸುವ ಕುರಿತು ಜನಜಾಗೃತಿಗಾಗಿ ರಾಜ್ಯದ ಹಲವು ಭಾಗಗಳಲ್ಲಿ ಜಾಥಾ ನಡೆಸಿ ಅರಿವು ಮೂಡಿಸಲಾಗುತ್ತಿದೆ ಎಂದು ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಮುಕುಂದ ರಾಜ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಳೆದ ಹತ್ತು ವರ್ಷದ ಕೇಂದ್ರ ಸರ್ಕಾರದ ಆಡಳಿತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹಾಗೂ ಸಂವಿಧಾನಕ್ಕೆ ಆಪತ್ತು ತರುವ ಹುನ್ನಾರ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜನಜಾಗೃತಿಗಾಗಿ ಚಾಮರಾಜನಗರದಿಂದ ಜಾಗೃತಿ ಜಾಥಾ ಆರಂಭ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಕನ್ನಡ ಸಾಹಿತ್ಯದಲ್ಲಿ ಜಾತ್ಯತೀತ ಪ್ರಜ್ಞೆ ಇದೆ. ಯಾರು ಗಂಭೀರವಾಗಿ ಕನ್ನಡ ಸಾಹಿತ್ಯ ಅಧ್ಯಯನ ಮಾಡುತ್ತಾರೋ ಅವರು ಯಾವುದೇ ಜಾತಿ ಮತ್ತು ಧರ್ಮ ಎಂಬ ಸಂಕುಚಿತ ಮನುಷ್ಯ ವಿರೋಧಿಯಾದ ವಿಚಾರಗಳಿಗೆ ಒಳಗಾಗುವುದಿಲ್ಲ. ಕನ್ನಡ ಸಾಹಿತ್ಯದಿಂದ ದೂರ ಬಂದವರು ಮಾತ್ರ ರಾಜಕಾರಣದಲ್ಲಿ ವಿಷ ಬೀಜ ಬಿತ್ತುವಲ್ಲಿ ನಿರತರಾಗುತ್ತಾರೆ ಎಂದು ಆರೋಪಿಸಿದರು.
ಹೀಗಾಗಿ ಕನ್ನಡ ಸಾಹಿತ್ಯವನ್ನು ಎಲ್ಲೆಡೆ ತೆಗೆದುಕೊಂಡು ಹೋಗಬೇಕಾದ ಅನಿವಾರ್ಯತೆಯಿದೆ. ಡಾ. ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಹೇಳಿರುವಂತೆ ಜಾತ್ಯತೀತವಾಗಿ, ವೈಚಾರಿಕ ಚಿಂತಕರಾಗಿ, ವೈಜ್ಞಾನಿಕ ಪ್ರಜ್ಞೆ ಇರಬೇಕು. ದೇಶದ ಸಾರ್ವಭೌಮತೆ ಕಾಪಾಡುವ ಜೊತೆಗೆ ಸ್ವಾತಂತ್ರÈ ಹಾಗೂ ಸಮಾನತೆಯನ್ನು ಎತ್ತಿಹಿಡಿಯಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಕಾಂಗ್ರೆಸ್ ಮುಖಂಡ ರವೀಶ್ ಬಸಪ್ಪ, ಪ್ರಮುಖರಾದ ಮಂಜುನಾಥ ಸ್ವಾಮಿ, ಗುರುಶಾಂತಪ್ಪ, ನಿಜಗುಣ ಮತ್ತಿತರರಿದ್ದರು.