ಜಿಲ್ಲೆ

ಮತ ಹಾಕಿಲ್ಲವೆಂದು ಗ್ರಾಮಗಳ ಕಡೆಗಣನೆ ಸಲ್ಲ

ಎನ್.ವೆಂಕಟೇಶ್

ಸಂಸದ ಡಾ.ಕೆ. ಸುಧಾಕರ್ ಅಭಿಮತ ದೇವಿಕುಂಟೆ ರಸ್ತೆ ಅಭಿವೃದ್ಧಿ ಭರವಸೆ

ಬಾಗೇಪಲ್ಲಿ: ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊತ್ತಕೋಟೆ, ಮಾರಗಾನುಕುಂಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ವಿಶೇಷ ಅನುದಾನ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಶೀಘ್ರವೇ ಅಭಿವೃದ್ಧಿ ಮಾಡಲಾಗುವುದು ಎಂದು ಸಂಸದ ಡಾ. ಕೆ. ಸುಧಾಕರ್ ಭರವಸೆ ನೀಡಿದರು.

ತಾಲೂಕಿನ ಕೊತ್ತಕೋಟೆ ಗ್ರಾಮದ ಬಳಿ ಶುಕ್ರವಾರ ಹಮ್ಮಿಕೊಂಡಿದ್ದ ಸಂಸದರ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ನಾಗರಿಕರ ಅಹವಾಲು ಸ್ವೀಕರಿಸಿ ಮಾತನಾಡಿದರು.

ಸಂಸದರಾಗಲೀ, ಶಾಸಕರಾಗಲೀ ಗೆದ್ದನಂತರ ಇಡೀ ಕ್ಷೇತ್ರಕ್ಕೆ ಸರ್ಕಾರದ ಪ್ರತಿನಿಧಿಗಳಾಗುತ್ತಾರೆ. ಗೆದ್ದಂತಹವರುಎಲ್ಲರನ್ನೂ ಸಮನಾಗಿ ಕಾಣಬೇಕು. ಮತ ಹಾಕಿಲ್ಲ ಎಂದು ಯಾವುದೇ ಒಂದು ನಿರ್ದಿಷ್ಟ ಗ್ರಾಮಗಳನ್ನು ಕಡೆಗಣಿಸಿದರೆ ಮುಂದಿನ ದಿನಗಳಲ್ಲಿ ಕೆಟ್ಟ ಪರಿಣಾಮ ಎದುರಿಸಬೇಕಾಗುತ್ತದೆ ಎಂದರು.

ಇನ್ನು ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಬಂದರೆ ಎಲ್ಲೆಡೆ ಹದಗೆಟ್ಟ ರಸ್ತೆಗಳೇ ಇದ್ದು, ಎಲ್ಲರೂ ಒಟ್ಟಿಗೆ ಕೈಜೋಡಿಸಿ ಸಮಸ್ಯೆ ಸರಿಪಡಿಸಲು ಕೆಲಸ ಮಾಡಬೇಕಿದೆ. ಕೇಂದ್ರ ಸರ್ಕಾರ ಒಬ್ಬ ಸಂಸದನಿಗೆ ವಾರ್ಷಿಕ 5 ಕೋಟಿ ರೂ. ಅನುದಾನ ನೀಡುವುದರಿಂದ ಬಾಗೇಪಲ್ಲಿ ಒಂದೇ ಕ್ಷೇತ್ರದಲ್ಲಿನ ರಸ್ತೆ ಸರಿಪಡಿಸಲು ಇದರಿಂದ ಸಾಧ್ಯವಾಗುವುದಿಲ್ಲ. ಆದ್ದರಿಂದ ಕೇಂದ್ರ ಸರ್ಕಾರದ ಪಿಎಂಜಿಎಸ್‌ವೈ ಯೋಜನೆಯಡಿ ವಿಶೇಷ ಅನುದಾನ ತಂದು ರಸ್ತೆಗಳನ್ನು ಅಭಿವೃದ್ಧಿಪಡಿಸುವ ಜತೆಗೆ ಮಾರಗಾನುಕುಂಟೆ ಗ್ರಾಪಂ ವ್ಯಾಪ್ತಿಯ ದೇವಿಕುಂಟೆ ಗ್ರಾಮದ ರಸ್ತೆಗೆ ವಿಶೇಷ ಅನುದಾನ ಬಿಡುಗಡೆ ಮಾಡಿಸಿ ಅಭಿವೃದ್ಧಿಪಡಿಸಲಾಗುವುದು ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದರು.

10 ವರ್ಷಗಳಿಂದ ಅಭಿವೃದ್ಧಿ ಕಡೆಗಣನೆ

ಗ್ರಾಪಂ ಸದಸ್ಯ ದೇವಿಕುಂಟೆ ಶ್ರೀನಿವಾಸ್ ಮಾತನಾಡಿ, ದೇವಿಕುಂಟೆ ಗ್ರಾಮಸ್ಥರು ಮತ ಹಾಕುತ್ತಿಲ್ಲ ಎಂದು ದ್ವೇಷ ಸಾಧಿಸುತ್ತಿರುವ ಈ ಭಾಗದ ಶಾಸಕರು 10 ವರ್ಷಗಳಿಂದ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಂಡಿಲ್ಲ. ಗಾಮಸ್ಥರು ಮತದಾನ ಬಹಿಷ್ಕರಿಸಿದಾಗ ಜಿಲ್ಲಾಧಿಕಾರಿಗಳು ಮತದಾನ ಮಾಡಿದರೆ ರಸ್ತೆ ಕಾಮಗಾರಿಗೆ ಅನುದಾನ ನೀಡುವ ಭರವಸೆ ನೀಡಿ ವರ್ಷ ಕಳೆಯುತ್ತಿದ್ದರೂ ಇತ್ತ ಮುಖ ಮಾಡಿಲ್ಲ. ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ರಸ್ತೆ ಭಾಗ್ಯ ಸಿಕ್ಕಿಲ್ಲ. ಸಂಸದರಾದರೂ ಗ್ರಾಮಕ್ಕೆ ರಸ್ತೆ ನಿರ್ಮಿಸಿಕೊಡುವಂತೆ ಮನವಿ ಮಾಡಿದರು. ಇದಕ್ಕೆ ಸಂಸದರು ಸಕಾರಾತ್ಮಕವಾಗಿ ಸ್ಪಂದಿಸಿದರು.

ಜಿಪಂ ಮಾಜಿ ಸದಸ್ಯ ಹರಿನಾಥರೆಡ್ಡಿ, ಒಕ್ಕಲಿಗರ ಸಂಘದ ಪ್ರಧಾನ ಕಾರ್ಯದರ್ಶಿ ಟಿ.ಕೋನಪ್ಪರೆಡ್ಡಿ, ಗ್ರಾಪಂ ಉಪಾಧ್ಯಕ್ಷ ಈಶ್ವರರೆಡ್ಡಿ, ಸದಸ್ಯ ಗಂಗಾಧರ, ಮುಖಂಡರಾದ ಮಂಜುನಾಥರೆಡ್ಡಿ, ರಂಗಾರೆಡ್ಡಿ, ಶ್ರೀನಿವಾಸರೆಡ್ಡಿ, ಸುರೇಂದ್ರ, ಚಂದ್ರಶೇಖರರೆಡ್ಡಿ, ಗಂಗಿರೆಡ್ಡಿ, ಪಿಚ್ಚಲವಾರಪಲ್ಲಿ ಮಂಜುನಾಥ, ಅಂಜಿನಪ್ಪ, ರಾಮಪ್ಪ, ಶಿವಾರೆಡ್ಡಿ, ಚಿನ್ನಪ್ಪಯ್ಯ ಮತ್ತಿತರರು ಇದ್ದರು.