ಚಿಕ್ಕಬಳ್ಳಾಪುರ: ಮಾಲೂರು ವಿಧಾನಸಭಾ ಕ್ಷೇತ್ರದ ಮಾದರಿಯಲ್ಲಿ ಅಕ್ರಮ ನಡೆದಿರುವ ಇತರ ಕ್ಷೇತ್ರಗಳಲ್ಲೂ ಮತದಾನದ ಪ್ರಕ್ರಿಯೆಯ ಸೂಕ್ತ ತನಿಖೆಯಾಗಬೇಕಾಗಿದೆ ಎಂದು ಸಂಸದ ಡಾ.ಕೆ.ಸುಧಾಕರ್ ಒತ್ತಾಯಿಸಿದ್ದಾರೆ.
ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದಲ್ಲಿನ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ 2023 ರಲ್ಲಿ ನಡೆದ ಚುನಾವಣೆಯಲ್ಲಿ ಮತ ಎಣಿಕೆ ಗೊಂದಲ ವಿಚಾರವನ್ನು ಪ್ರಶ್ನಿಸಿ, ಮಂಜುನಾಥ ಗೌಡ ಎಂಬುವರು ಹೈಕೋರ್ಟ್ ಕೋರ್ಟ್ ಮೆಟ್ಟಿಲೇರಿದ್ದರು. ಇದರ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರು ಮರು ಮತ ಎಣಿಕೆಗೆ ಆದೇಶಿಸಿದ್ದಾರೆ. ಹಾಗೆಯೇ ಕಾಂಗ್ರೆಸ್ ಶಾಸಕ ಕೆ.ವೈ.ನಂಜೇಗೌಡರ ಆಯ್ಕೆ ಅಸಿಂಧು ಎಂಬುದಾಗಿ ಘೋಷಿಸಿದ್ದಾರೆ. ಈ ತೀರ್ಪು ನೀಡಿರುವುದು ಸ್ವಾಗತಾರ್ಹ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂಬ ಭಾವನೆ ಮೂಡುತ್ತಿದ್ದಂತೆ ಮಾಲೂರು ಕ್ಷೇತ್ರದಲ್ಲಿ ಪ್ರಭಾವಕ್ಕೊಳಕ್ಕಾಗಿ ಮತ ಎಣಿಸಿದ್ದಾರೆ ಎಂಬ ಅನುಮಾನ ಖಚಿತವಾಗಿದೆ. ಈಗ ನ್ಯಾಯಾಲಯದ ಆದೇಶದಂತೆ ಮರು ಎಣಿಕೆ ನಡೆಸಿದ್ದಲ್ಲಿ ಮಂಜುನಾಥ ಗೌಡರು ಮತ್ತೆ ಶಾಸಕರಾಗಿ ಆಯ್ಕೆಯಾಗಲಿದ್ದಾರೆ ಎಂಬ ವಿಶ್ವಾಸವಿದೆ.
ಇದೇ ರೀತಿ ಇನ್ನೂ ಅನೇಕ ಕ್ಷೇತ್ರಗಳಲ್ಲಿ ಅಕ್ರಮ ನಡೆದಿರುವ ಸಾಧ್ಯತೆ ಇದ್ದು ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಚುನಾವಣಾ ಅಕ್ರಮಕ್ಕೆ ಪಿತಾಮಹ ಕಾಂಗ್ರೆಸ್ ಪಕ್ಷ. ಇದು ಅನೇಕ ದಶಕಗಳಿಂದ ವಾಮಮಾರ್ಗದಲ್ಲಿಯೇ ಗೆಲ್ಲುವುದನ್ನು ರೂಢಿಸಿಕೊಂಡು ಬಂದಿದೆ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ ಇವಿಎಂ ಮೂಲಕ ಪಾರದರ್ಶಕ ಚುನಾವಣೆಗಳು ನಡೆಯುತ್ತಿವೆ, ಆದರೂ ಸೋಲಿನ ಹತಾಶ ಭಾವನೆಯಲ್ಲಿ ಕಾಂಗ್ರೆಸ್ ಸುಳ್ಳು ಟೀಕೆಗಳ ಮೂಲಕ ಗೊಂದಲ ಮೂಡಿಸುತ್ತಿದೆ ಎಂದರು.