ಜಿಲ್ಲೆ

ಸರತಿ ಸಾಲಿನಲ್ಲಿ ನಿಂತು ಮತ ಚಲಾವಣೆ

ರಾಜಣ್ಣ

ಪಾಂಡವಪುರ: ಜಿಲ್ಲಾ ಮತ್ತು ತಾಲೂಕು ವೀರಶೈವ ಲಿಂಗಾಯತ ಮಹಾಸಭಾ ಘಟಕದ ಅಧ್ಯಕ್ಷರು ಮತ್ತು ನಿರ್ದೇಶಕರ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಬಿರುಸಿನ ಮತ ಚಲಾವಣೆ ನಡೆಯಿತು.


ತಾಲೂಕಿನಲ್ಲಿ ಒಟ್ಟು 1703 ಮತಗಳಿದ್ದು, ಪಟ್ಟಣದ ಫ್ರೆಂಚ್‌ರಾಕ್ಸ್ ಶಾಲೆಯಲ್ಲಿ ಮತ ಕೇಂದ್ರ ತೆರೆಯಲಾಗಿತ್ತು. ಜಿಲ್ಲಾ ಮತ್ತು ತಾಲೂಕು ಘಟಕಗಳ ಚುನಾವಣೆಗಾಗಿ ಪ್ರತ್ಯೇಕವಾಗಿ ಎರಡೆರಡು ಮತ ಕೇಂದ್ರಗಳನ್ನು ತೆರೆದು ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಒಬ್ಬ ಮತದಾರ ಅಧ್ಯಕ್ಷ ಸ್ಥಾನ, ಮಹಿಳಾ ಮೀಸಲು ಸೇರಿದಂತೆ 20ಕ್ಕಿಂತಲೂ ಹೆಚ್ಚಿನ ನಿರ್ದೇಶಕರನ್ನು ಆಯ್ಕೆ ಮಾಡಬೇಕಾದ ಹಿನ್ನೆಲೆಯಲ್ಲಿ ಮತ ಚಲಾಯಿಸುವುದು ವಿಳಂಬವಾಗುತ್ತಿದ್ದ ಕಾರಣ ಮತದಾನ ಕೇಂದ್ರ ಮುಂದೆ ಬೆಳಗಿನಿಂದಲೂ ಸರತಿ ಸಾಲಿನಲ್ಲಿ ನಿಂತು ಮತದಾರರು ಮತ ಚಲಾಯಿಸಿದರು.


ಎರಡು ಬಣಗಳ ನಡುವೆ ವಾಗ್ವಾದ: ಯಾವ ವಿಧಾನಸಭಾ ಚುನಾವಣೆಗೂ ಕಡಿಮೆ ಇಲ್ಲದಂತೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎರಡು ತಂಡಗಳ ಸದಸ್ಯರು ಮತ್ತು ಬೆಂಬಲಿಗರ ನಡುವೆ ಮತ ಯಾಚನೆ ವೇಳೆ ಸಣ್ಣ ಪುಟ್ಟ ವಿಚಾರಗಳಿಗೂ ವಾಗ್ವಾದ ನಡೆಯಿತು. ಅಭ್ಯರ್ಥಿಗಳ ಬೆಂಬಲಿಗರು ಮತ ಕೇಂದ್ರದೊಳಗೆ ತೆರಳಿ ಪ್ರಚಾರ ಮಾಡುತ್ತಿದ್ದಾರೆ. ನಮ್ಮ ಮತದಾರರ ಓಟನ್ನು ಕದ್ದು ಹಾಕಿಸಲಾಗಿದೆ ಇತ್ಯಾದಿ ವಿಚಾರಗಳ ಸಂಬಂಧ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಪರಸ್ಪರ ನಿಂದಿಸಿಕೊಂಡರು. ಪೊಲೀಸರು ಮಧ್ಯೆ ಪ್ರವೇಶಿಸಿ ಎರಡು ತಂಡಗಳನ್ನು ಸಮಾಧಾನಪಡಿಸಿದರು. ಚುನಾವಣೆ ಹಿನ್ನೆಲೆಯಲ್ಲಿ ಮತ ಕೇಂದ್ರದ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.