ಕೊಳ್ಳೇಗಾಲ : ಸುಭದ್ರ ರಾಷ್ಟ್ರ ನಿರ್ಮಾಣ ಮತ್ತು ಸರ್ಕಾರ ರಚನೆಗಾಗಿ ನಾಗರಿಕರು ತಪ್ಪದೇ ಮತದಾನ ಮಾಡಬೇಕು ಎಂದು
ತಹಸೀಲ್ದಾರ್ ಎಂ.ಮಂಜುಳಾ ಹೇಳಿದರು. ಪಟ್ಟಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ಸ್ವೀಪ್ ಸಮಿತಿ, ಲೋಕಸಭಾ ಚುನಾವಣೆ ಸಂಬಂಧ ಭಾನುವಾರ ಆಯೋಜಿಸಿದ್ದ ‘ನಮ್ಮ ನಡೆ ಮತಗಟ್ಟೆ ಕಡೆ’ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದಲ್ಲಿ 2ನೇ ಹಂತದ ಚುನಾವಣೆ ಏ.26 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ನಾಗರಿಕರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಅದರಂತೆ, ‘ನಮ್ಮ ನಡೆ ಮತಗಟ್ಟೆ ಕಡೆ’ ಎಂಬ ಶೀರ್ಷಿಕೆಯಡಿ ಸಾರ್ವಜನಿಕರಿಗೆ ಮತಗಟ್ಟೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಏ.26 ರಂದು ಪ್ರತಿಯೊಬ್ಬರೂ ಮತದಾನ ಹಬ್ಬದಲ್ಲಿ ಭಾಗವಹಿಸಬೇಕು ಎಂದು ಅವರು ಹೇಳಿದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ್ ಮಾತನಾಡಿ, ತಾಲೂಕಿನ ಪ್ರತಿಯೊಂದು ಮತಗಟ್ಟೆಯಲ್ಲಿ ಮತದಾರರಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕುಡಿಯುವ ನೀರು, ಶೌಚಗೃಹ, ನೆರಳಿನ ವ್ಯವಸ್ಥೆ ಒದಗಿಸಲಾಗಿದೆ ಎಂದರು.
ಈಗಾಗಲೇ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಅಂಚೆ ಮತದಾನ ಮಾಡಿಸಿಕೊಳ್ಳಲಾಗಿದೆ. ಮತದಾನ ದಿನದಲ್ಲಿ ಮತ ಗಟ್ಟೆಯಲ್ಲಿರಬೇಕಾದ ಅಗತ್ಯ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಹಾಗಾಗಿ ಪ್ರತಿಯೊಬ್ಬ ಮತದಾರರೂ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಬೇಕು ಎಂದು ಅವರು ಮನವಿ ಮಾಡಿದರು.
ಜಾಥಾದಲ್ಲಿ ವಿವಿಧ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು. ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಿಂದ ಆರಂಭಗೊಂಡ ಜಾಥಾ, ಪ್ರಮುಖ ರಸ್ತೆಗಳಲ್ಲಿ ಸಾಗಿ ಮತದಾರರಿಗೆ ಜಾಗೃತಿ ಮೂಡಿಸಿತು. ವಿಶೇಷವಾಗಿ ಜಾಥಾದಲ್ಲಿ ತಮಟೆ, ವೀರಾಗಾಸೆ ನೃತ್ಯ ಎಲ್ಲರ ಕಣ್ಮನ ಸೆಳೆಯಿತು.
ನಗರಸಭೆ ಆಯುಕ್ತ ಎ.ರಮೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ. ಮಂಜುಳಾ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ನವೀನ್ ಮಠದ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಸುಂದ್ರಮ್ಮ, ಸಿಡಿಪಿಯು ನಂಜಮಣಿ ಮತ್ತಿತರರಿದ್ದರು.
21ಕೆಜಿಎಲ್-1 )))
ಕೊಳ್ಳೇಗಾಲದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ ಸ್ವೀಪ್ ಸಮಿತಿ ಸಂಯುಕ್ತವಾಗಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ‘ನಮ್ಮ ನಡೆ ಮತಗಟ್ಟೆ ಕಡೆ’ ಜಾಥಾದಲ್ಲಿ ಎಂ.ಮಂಜುಳಾ, ಶ್ರೀನಿವಾಸ್, ಮಂಜುಳಾ, ಎ.ರಮೇಶ್, ನಂಜಮಣಿ ಇತರರು ಇದ್ದರು.