ಜಿಲ್ಲೆ

ವಾಂತಿ-ಭೇದಿಯಿಂದ 50ಕ್ಕೂ ಹೆಚ್ಚು ಜನ ಅಸ್ವಸ್ಥ

ಲಿಂಗಸುಗೂರು: ಚಿತ್ತಾಪುರ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ವಾಂತಿ-ಭೇದಿಯಿಂದ ಬಳಲುತ್ತಿರುವ 50 ಕ್ಕೂ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಗ್ರಾಮದಲ್ಲಿ ತಾತ್ಕಾಲಿಕ ಆರೋಗ್ಯ ಕೇಂದ್ರ ತೆರೆದು ದಿನದ 24 ಗಂಟೆಯೂ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ.

ಗ್ರಾಮದಲ್ಲಿನ ವಿವಿಧ ಜಲಮೂಲ ಮತ್ತು ಗ್ರಾಮದಲ್ಲಿ ಪೂರೈಸುವ ನಳದ ನೀರು ಕುಡಿಯಲು ಯೋಗ್ಯವಿಲ್ಲವೆಂದು ಹೇಳಲಾಗುತ್ತಿದೆ. ಭಾನುವಾರ ಸಂಜೆಯಿಂದ ಗ್ರಾಮದ ಜನರಲ್ಲಿ ವಾಂತಿ-ಭೇದಿ ಶುರುವಾಗಿದ್ದು, 23 ಜನರು ಲಿಂಗಸುಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಡಲಬಂಡಾ(ಯುಕೆಪಿ) ಸಮುದಾಯ ಆರೋಗ್ಯ ಕೇಂದ್ರದಲ್ಲಿ ಇಬ್ಬರು ಹಾಗೂ ಗ್ರಾಮದ ತಾತ್ಕಾಲಿಕ ಆರೋಗ್ಯ ಕೇಂದ್ರದಲ್ಲಿ ಹಲವರು ಚಿಕಿತ್ಸೆ ಪಡೆಯುತ್ತಿದ್ದಾರೆ. 30 ಜನರು ಗುಣವಾಗಿ ಮನೆಗೆ ಹಿಂದಿರುಗಿದ್ದಾರೆ.

ಗ್ರಾಮದಲ್ಲಿನ ಶಾಲೆಗೆ ಸೋಮವಾರ ಮತ್ತು ಮಂಗಳವಾರ ರಜೆ ಘೋಷಿಸಲಾಗಿತ್ತು. ಗ್ರಾಮಸ್ಥರಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಗ್ರಾಪಂ ಮತ್ತು ಸರ್ಕಾರಿ ಶಾಲೆಯ ಬಳಿ ಕುಡಿಯುವ ನೀರು ಪೂರೈಸುವ ಪೈಪ್‌ಲೈನ್ ಹಾದು ಹೋಗಿದ್ದು, ಚರಂಡಿ ಮತ್ತು ಪೈಪ್‌ಲೈನ್ ಮೇಲೆಯೇ ತಿಪ್ಪೆಗುಂಡಿ ಹಾಕಲಾಗಿದೆ. ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿದ ದಿನದಿಂದ ಸ್ವಚ್ಛತೆ ಮಾಡಿಲ್ಲ. ಇತ್ತಿಚಿಗೆ ಸುರಿದ ಮಳೆಯಿಂದ ತಿಪ್ಪೆಗುಂಡಿಯ ತ್ಯಾಜ್ಯ ಮತ್ತು ಕೊಳಚೆ ನೀರು ಪೈಪ್‌ಲೈನ್ ಸೇರಿದೆ. ಇದರಿಂದಾಗಿ ಜನರು ವಾಂತಿ-ಭೇದಿಯಿಂದ ಬಳಲುವಂತಾಗಿದೆ ಎನ್ನಲಾಗುತ್ತಿದೆ. ಗ್ರಾಪಂ ಅಧಿಕಾರಿಗಳ ನಿರ್ಲಕ್ಷ್ಯವೇ ಕಲುಷಿತ ನೀರು ಸೇವನೆಗೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.