ಜಿಲ್ಲೆ

ಆಣೂರು ವಸತಿ ನಿಲಯ ವಿದ್ಯಾರ್ಥಿನಿಯರಿಗೆ ವಾಂತಿ-ಭೇದಿ

ಬ್ಯಾಡಗಿ: ವಾಂತಿ- ಭೇದಿಯಿಂದಾಗಿ ತಾಲೂಕಿನ ಆಣೂರು ಗ್ರಾಮದ ಹಿಂದುಳಿದ ವರ್ಗಗಳ ವಿದ್ಯಾರ್ಥಿನಿಯರ ವಸತಿ ನಿಲಯದ ಮಕ್ಕಳು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದಾರೆ.

ವಸತಿ ನಿಲಯದಲ್ಲಿ ಭಾನುವಾರ, ಸೋಮವಾರ ಊಟ ಸೇವಿಸಿದ ಬಳಿಕ ಮಕ್ಕಳಲ್ಲಿ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಒಂದೆರಡು ಮಕ್ಕಳಲ್ಲಿ ವಾಂತಿ- ಭೇದಿ ಕಾಣಿಸಿಕೊಂಡಿದೆ. ಬಳಿಕ ಬ್ಯಾಡಗಿಯ ಸರ್ಕಾರಿ ಆಸ್ಪತ್ರೆಗೆ 25 ಮಕ್ಕಳನ್ನು ಕರೆತಂದು ಚಿಕಿತ್ಸೆ ಕೊಡಿಸಲಾಗಿದೆ.

ಈ ಕುರಿತು ಮಾತನಾಡಿದ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಪುಟ್ಟರಾಜ, ಭಾನುವಾರ ಸಂಜೆ ಮಕ್ಕಳಿಗೆ ಸ್ವಲ್ಪಮಟ್ಟಿನ ಆರೋಗ್ಯ ತೊಂದರೆ ಕಾಣಿಸಿಕೊಂಡಿದೆ. ಬಳಿಕ 11 ಮಕ್ಕಳು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ತೆರಳಿದ್ದಾರೆ. ಮಂಗಳವಾರ, ಬುಧವಾರವೂ 14 ಮಕ್ಕಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. 25 ವಿದ್ಯಾರ್ಥಿನಿಯರ ಪೈಕಿ ಒಬ್ಬ ವಿದ್ಯಾರ್ಥಿನಿಯನ್ನು ಹಾವೇರಿ ಆಸ್ಪತ್ರೆಗೆ ದಾಖಲು ಮಾಡಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ. ಘಟನೆ ಕಾರಣ ಗೊತ್ತಾಗಿಲ್ಲ. ಆಹಾರ, ನೀರು ಹಾಗೂ ಮಕ್ಕಳ ರಕ್ತ ಪರೀಕ್ಷೆಗೆ ಒಳಪಡಿಸಿದ್ದೇವೆ. ನಿಲಯಕ್ಕೆ ವೈದ್ಯಕೀಯ ತಂಡ ತೆರಳಿದೆ ಎಂದು ತಿಳಿಸಿದರು.

ಸಾರ್ವಜನಿಕ ಆಸ್ಪತ್ರೆಗೆ ಶಾಸಕ ಬಸವರಾಜ ಶಿವಣ್ಣನವರ ಬುಧವಾರ ಭೇಟಿ ನೀಡಿ, ವಾಂತಿ- ಭೇದಿಯಿಂದಾಗಿ ದಾಖಲಾದ ವಸತಿ ನಿಲಯದ ಮಕ್ಕಳ ಆರೋಗ್ಯ ವಿಚಾರಿಸಿದರು. ಡಾ.ಪುಟ್ಟರಾಜ, ಹಿಂದುಳಿದ ವರ್ಗಗಳ ತಾಲೂಕು ಕಲ್ಯಾಣ ಇಲಾಖೆ ಸಿ.ಬಿ. ಪ್ರಸಾದಿಮಠ, ನಿಲಯದ ಮೇಲ್ವಿಚಾರಕ ದಿಳ್ಳೆಪ್ಪ ಕುರಿಯವರ, ಕಾಂಗ್ರೆಸ ಘಟಕದ ಅಧ್ಯಕ್ಷ ದಾನಪ್ಪ ಚೂರಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ ಇತರರಿದ್ದರು.