ಕಂಪ್ಲಿ ಅಮೃತ ಶಿಲಾರಾಮಚಂದ್ರ ದೇವಸ್ಥಾನ ಬಳಿ ರಸ್ತೆ ವಿಸ್ತರಣೆ ಕಾರ್ಯ ಆರಂಭಿಸಲಾಯಿತು. ಶಾಸಕ ಜೆ.ಎನ್.ಗಣೇಶ್, ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಉಸ್ಮಾನ್, ಸಿಒ ಕೆ.ದುರುಗಣ್ಣ, ಜೆಇ ಮೇಘನಾ ಇತರರಿದ್ದರು. 
ಜಿಲ್ಲೆ

ಸ್ವಯಂಪ್ರೇರಿತರಾಗಿ ತೆರವು ಮಾಡಿಕೊಳ್ಳಿ

ಕಂಪ್ಲಿ: ಪಟ್ಟಣದ ನಡುವಲ ಮಸೀದಿಯಿಂದ ಜೋಗಿ ಕಾಲುವೆತನಕ ರಸ್ತೆ ವಿಸ್ತರಣೆ ಕುರಿತು ಪಟ್ಟಣದ ಅಮೃತಶಿಲಾ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಶಾಸಕ ಜೆ.ಎನ್.ಗಣೇಶ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಶನಿವಾರ ನಡೆಯಿತು. ಚರಂಡಿ ಹಾಗೂ 35 ಅಡಿ ರಸ್ತೆ ನಿರ್ಮಾಣಕ್ಕೆ ತೀರ್ಮಾನಿಸಲಾಯಿತು.

ಪುರಸಭೆ ಮುಖ್ಯಾಧಿಕಾರಿ ಕೆ.ದುರುಗಣ್ಣ ಮಾತನಾಡಿ, ರಸ್ತೆ ಮಧ್ಯೆಯಿಂದ ತಲಾ 30 ಅಡಿ ತೆರವುಗೊಳಿಸಿ ವಿಸ್ತರಿಸುವ ಯೋಜನೆಯಿದ್ದು ಸಾರ್ವಜನಿರಿಕರು ಸಹಕರಿಸುವಂತೆ ಕೋರಿದರು. ನಿವಾಸಿ ರಮೇಶ್ ಬಬಲೇಶ್ವರ್ ಮತ್ತಿತತರು ಮಾತನಾಡಿ, 60 ಅಡಿ ರಸ್ತೆ ಬದಲಿಗೆ ಚರಂಡಿ ಜಾಗ ಒಳಗೊಂಡಂತೆ 30 ಅಡಿ ರಸ್ತೆ ನಿರ್ಮಿಸಬೇಕು. ರಸ್ತೆಯನ್ನು ಎತ್ತರಿಸಬಾರದು. ಕುಡಿವ ನೀರಿನ ಪೈಪ್‌ಗಳನ್ನು ಅಚ್ಚುಕಟ್ಟಾಗಿ ರಸ್ತೆ ಎರಡೂ ಬದಿ ದುರಸ್ತಿಗೆ ಅನುವಾಗುವಂತೆ ಜೋಡಿಸಿಕೊಡಬೇಕು. ಪಾದಚಾರಿ ರಸ್ತೆ ನಿರ್ಮಿಸಬಾರದು. ಕಾಮಗಾರಿಯನ್ನು ತುರ್ತಾಗಿ ಮುಗಿಸಬೇಕು. ಚರಂಡಿ ಮೇಲೆ ಸ್ಲ್ಯಾಬ್ ಹಾಕಿಕೊಡಬೇಕು. ತಾರತಮ್ಯ ಎಸಗದೆ ಒಂದೇ ಅಳತೆಯ ರಸ್ತೆ ನಿರ್ಮಿಸಬೇಕು ಎಂದರು.

ಶಾಸಕ ಜೆ.ಎನ್.ಗಣೇಶ್ ಮಾತನಾಡಿ, ರಸ್ತೆ ಮಧ್ಯೆಯಿಂದ ಎರಡೂ ಬದಿಗೆ ತಲಾ 17.5 ಅಡಿ ತೆರವುಗೊಳಿಸಲಾಗುವುದು. ಇದರಲ್ಲಿ ಎರಡು ಬದಿಗೆ ಎರಡೂವರೆ ಅಡಿ ಚರಂಡಿ ನಿರ್ಮಿಸಲಾಗುವುದು. ಪಿಡಬ್ಲ್ಯುಡಿ, ಜೆಸ್ಕಾಂ, ಪುರಸಭೆ, ಪೊಲೀಸ್ ಅಧಿಕಾರಿಗಳು ಸಮನ್ವಯ ಸಾಧಿಸಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕೆಲಸ ನಿರ್ವಹಿಸಬೇಕು ಎಂದು ಸೂಚಿಸಿದರು.

ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್ ಮಾತನಾಡಿ, ರಸ್ತೆ ಮಧ್ಯೆಯಿಂದ ತಲಾ17.5 ಅಡಿ ಗುರುತಿಸಿ ಮಾರ್ಕ್ ಮಾಡಲಾಗುವುದು. ಸ್ವಯಂಪ್ರೇರಿತರಾಗಿ ತೆರವುಗೊಳಿಸಿಕೊಳ್ಳಿ. ಇಲ್ಲದಿದ್ದಲ್ಲಿ ಪುರಸಭೆಯಿಂದ ತೆರವುಗೊಳಿಸಲಾಗುವುದು. ವಿದ್ಯುತ್ ಕಂಬಗಳ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ರಸ್ತೆ ವಿಸ್ತರಣೆ ಕಾಮಗಾರಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.

ಪಿಐ ಕೆ.ಬಿ.ವಾಸುಕುಮಾರ್, ನಿವಾಸಿಗಳಾದ ವಿ.ವಿದ್ಯಾಧರ, ಗೌಡ್ರು ಗೋಪಾಲಕೃಷ್ಣ, ನಿರಂಜನಗುಪ್ತ, ಡಿ.ವಿ.ಸುಬ್ಬಾರಾವ್, ಜಿ.ರಾಜಾರಾವ್, ಗೋವರ್ಧನಗಿರಿ, ಎಸ್.ರಾಘವೇಂದ್ರ, ಜಿ.ಬಿ.ಕೋಟೇಶ್ವರ, ಗೋಟೂರು ರವೀಂದ್ರನಾಥ ಇತರರಿದ್ದರು.