ಚನ್ನಗಿರಿ: ಮಹಿಳೆಯರು ಹಾಗೂ ಅಪ್ರಾಪ್ತ ವಯಸ್ಸಿನ 30 ಕ್ಕೂ ಹೆಚ್ಚು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಮೆಡಿಕಲ್ ಶಾಪ್ ಮಾಲೀಕ, ಆರೋಪಿ ಅಮ್ಜದ್ ವಿರುದ್ಧ ಸೋಮವಾರ ಹಮ್ಮಿಕೊಂಡಿದ್ದ ಚನ್ನಗಿರಿ ಬಂದ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಹೆಣ್ಣುಮಕ್ಕಳನ್ನು ಅಮಾನವೀಯವಾಗಿ ಬಳಸಿಕೊಂಡ ತಪ್ಪಿತಸ್ಥನಿಗೆ ಗಲ್ಲುಶಿಕ್ಷೆ ವಿಧಿಸಲು ಒತ್ತಾಯಿಸಿ ಪಟ್ಟಣದ ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟುಗಳನ್ನು ತೆರೆಯದೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಬೆಳಗ್ಗೆ 8 ಗಂಟೆಗೆ ಪಟ್ಟಣದ ಪ್ರಮುಖ ಬಸ್ ನಿಲ್ದಾಣದ ಎರಡು ಕಡೆಗಳಲ್ಲಿ ಟೈರ್ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು ಸೇರಿ ಹಲವು ಕಡೆಗಳಿಂದ ಚನ್ನಗಿರಿಗೆ ಬರುತ್ತಿದ್ದ ಬಸ್ಗಳನ್ನು ನಿಲ್ದಾಣದ ಒಳಗೆ ಬಿಡದೆ ತಡೆದರು.
ಪ್ರತಿಭಟನೆಗೆ ಸಹಕಾರ ನೀಡಬೇಕು ಎಂದು ವಾಹನಗಳನ್ನು ನಿಲ್ಲಿಸಿದ್ದರಿಂದ ಸ್ವಲ್ಪಸಮಯ ಪಟ್ಟಣವು ಬಿಗುವಿನ ವಾತವರಣದಿಂದ ಕೂಡಿತ್ತು. ವಿಷಯ ತಿಳಿದ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರು.
ಪಟ್ಟಣದ ಊರಬಾಗಿಲ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಸಾವಿರಾರು ಸಂಖ್ಯೆಯಲ್ಲಿ ಹಿಂದುಪರ ಸಂಘಟಕರು ಜಮಾಯಿಸಿದರು. ಕಲ್ಲುಸಾಗರ ರಸ್ತೆ, ಗಣಪತಿ ವೃತ್ತ, ಮೇದಾರ ಬೀದಿ, ರಾಷ್ಟ್ರೀಯ ಹೆದ್ದಾರಿ, ಜ್ಯೂನಿಯರ್ ಕಾಲೇಜು ರೋಡ್, ನೃಪತುಂಗ ರಸ್ತೆ ಮೂಲಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಜಿ.ಎಸ್.ಶಂಕರಪ್ಪ ಅವರಿಗೆ ಮನವಿ ಸಲ್ಲಿಸಿದರು. ದಾರಿಯುದ್ದಕ್ಕೂ ಆರೋಪಿ ಅಮ್ಜದ್ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ನ್ಯಾಯ ಕೊಡಿಸುವಂತೆ ಆಗ್ರಹಿಸಿದರು.
ಬಜರಂಗದಳ ದಕ್ಷಿಣ ಪ್ರಾಂತ್ಯ ಸಹ ಸಂಯೋಜಕ ಬೆಂಗಳೂರು ಗೋವರ್ಧನ್ ಮಾತನಾಡಿ, ಕಳೆದ 10 ವರ್ಷಗಳಿಂದ ಲೈಂಗಿಕ ದೌರ್ಜನ್ಯ ನಡೆಸುತ್ತ ಬಂದಿರುವ ಆರೋಪಿಯು ಮಾಡಿದ ಕೃತ್ಯಗಳನ್ನು ವಿಡಿಯೋ ಮಾಡಿಕೊಂಡು ದುರ್ಬಳಕೆ ಮಾಡಿಕೊಂಡಿದ್ದಾನೆ. ಇಂತಹ ವಿಕೃತ ಕಾಮಿಯನ್ನು ಬಿಡಬಾರದು ಎಂದರು.
ಅಪ್ರಾಪ್ತ ಹೆಣ್ಣುಮಕ್ಕಳನ್ನು ಕಾಮತೃಷೆಗೆ ಬಳಕೆ ಮಾಡಿಕೊಂಡ ಆರೋಪಿ ಮೇಲೆ ಪೋಕ್ಸೊ, ಸುಮೊಟೊ ಪ್ರಕರಣ ದಾಖಲಿಸಿದರೆ ಸಾಲದು. ನ್ಯಾಯಾಲಯ ವಿಚಾರಣೆಗೆ ಅವಕಾಶ ನೀಡದೆ ನೇರವಾಗಿ ಗಲ್ಲುಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.
ವಿಕೃತ ಮನಸ್ಸಿನ ಆರೋಪಿ ಪಟ್ಟಣದಲ್ಲಿ ಬಾಡಿಗೆ ಮನೆ ಮಾಡಿ ಮಹಿಳೆಯರನ್ನು ಕರೆದುಕೊಂಡು ಹೋಗುತ್ತಿದ್ದನು. ರಸ್ತೆ, ಅಂಗಡಿ, ಬಸ್ಗಳಲ್ಲಿ ಹೋಗುವ ಮಹಿಳೆಯರ ವಿಡಿಯೋ ಮಾಡಿ ವಿಕೃತವಾಗಿ ನಡೆದುಕೊಳ್ಳುತ್ತಿದ್ದ ಎಂದು ಆರೋಪಿಸಿದರು.
ವಿಶ್ವ ಹಿಂದು ಪರಿಷತ್ ಜಿಲ್ಲಾ ಕೋಶಾಧ್ಯಕ್ಷ ಕೆ.ಎಚ್.ಮಂಜುನಾಥ್ ಮಾತನಾಡಿ, ಆರೋಪಿ ಪರವಾಗಿ ಯಾವ ವಕೀಲರೂ ವಾದ ನಿಲ್ಲಬಾರದು. ಆತನಿಗೆ ನೇರವಾಗಿ ಮರಣ ದಂಡನೆ ವಿಧಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆ ರಾಜ್ಯ ಸಂಘಟನಾ ಕಾರ್ಯದರ್ಶಿ ಪರಶುರಾಮ್ ನಡುಮನಿ, ಬಿಜೆಪಿ ಮುಖಂಡ ಮಾಡಾಳು ಮಲ್ಲಿಕಾರ್ಜುನ್, ಎಚ್.ಎಸ್.ಶಿವಕುಮಾರ್, ಪುರಸಭೆ ಸದಸ್ಯರಾದ ಕಮಲಾ ಹರೀಶ್, ಸವಿತಾ ರಾಘವೇಂದ್ರ, ಮಾರುತಿ, ನಾಗೇಶ್, ಹನುಮಂತ, ಮಿಥುನ್ ಸೇರಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.