oppo_0 
ಜಿಲ್ಲೆ

ಮಂಡ್ಯದಲ್ಲಿ ಹೆಚ್ಚಿರುವ ರಕ್ತದಾನಿ ಸಂಖ್ಯೆ: ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮೆಚ್ಚುಗೆ

ಕೆ.ಎನ್.ರಾಘವೇಂದ್ರ

ಮಂಡ್ಯ: ಬೇರೆ ಜಿಲ್ಲೆಗಳಿಗೆ ಹೋಲಿಕೆ ಮಾಡಿದರೆ ಮಂಡ್ಯದಲ್ಲಿ ರಕ್ತದಾನಿಗಳ ಸಂಖ್ಯೆ ಹೆಚ್ಚಿರುವುದು ಹೆಮ್ಮೆಯ ವಿಚಾರ ಎಂದು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಮಿಮ್ಸ್‌ನ ರಕ್ತನಿಧಿ ಕೇಂದ್ರದ ಆವರಣದಲ್ಲಿ ಅಸೋಷಿಯೇಷನ್ ಆಫ್ ಅಲಯನ್ಸ್ ಕ್ಲಬ್ಸ್ ಇಂಟರ್‌ನ್ಯಾಷನಲ್‌ನಿಂದ ಆಯೋಜಿಸಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆ ಹಾಗೂ ಹೆಚ್ಚು ರಕ್ತದಾನ ಮಾಡಿದವರಿಗೆ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮಾನವೀಯ ಗುಣವುಳ್ಳ ರಕ್ತದಾನಿಗಳ ಸಂಖ್ಯೆ ವೃದ್ಧಿಸುತ್ತಿದೆ. ಅಗತ್ಯಯುಳ್ಳವರಿಗೆ ತಕ್ಷಣವೇ ರಕ್ತನೀಡುವ ಸೇವಾಮನೋಭಾವದವರಿದ್ದಾರೆ ಎಂದರು.

ಇದಲ್ಲದೆ ರಕ್ತದಾನ ಶಿಬಿರ ಆಯೋಜಿಸುವುದನ್ನೇ ಹವ್ಯಾಸ ಮಾಡಿಕೊಂಡಿರುವುದು ಸಾಧನೆ. ಇದರ ಪರಿಣಾಮ ರಕ್ತ ಕೊಡುವವರಿಗೆ ಪ್ರೇರಣೆಯಾಗುತ್ತಿದೆ. ಅಲಯನ್ಸ್ ಸಂಸ್ಥೆ ಪದಾಧಿಕಾರಿಗಳು ಸಾಕಷ್ಟು ಜನಸೇವೆ ಕಾರ್ಯ, ಪರಿಸರ ಸೇವೆ ಕಾರ್ಯಕ್ರಮಗಳನ್ನು ರೂಪಿಸುತ್ತಿದ್ದಾರೆ. ಇಂತಹವರ ಸಂಖ್ಯೆ ಹೆಚ್ಚಬೇಕಿದೆ. ಇದರಿಂದ ಇನ್ನೊಬ್ಬರಿಗೆ ಮಾದರಿಯಾಗುತ್ತಿದ್ದಾರೆ ಎಂದು ಶ್ಲಾಘಿಸಿದರು.

ಅಲಯನ್ಸ್ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಕೆ.ಟಿ.ಹನುಮಂತು ಮಾತನಾಡಿ, 1901ರಲ್ಲಿ ಆಸ್ಟ್ರಿಯಾ ದೇಶದ ವೈದ್ಯರು ರಕ್ತದ ಗುಂಪುಗಳ ವರ್ಗೀಕರಣ ಕಂಡು ಹಿಡಿದದರು. ಇಂತಹ ಮಹಾಸಾಧನೆಯಿಂದ ಸಾಕಷ್ಟು ಜೀವಗಳು ಉಳಿಯುವಂತಾಗಿದೆ. ಜೂ.14ರಂದು ವಿಶ್ವ ರಕ್ತದಾನಿಗಳ ದಿವಸ. ಆದರೆ ಭಾರತದಲ್ಲಿ ಅ.1ರಂದು ಆಚರಣೆ ಮಾಡಲಾಗುತ್ತದೆ. ಅಗತ್ಯವಿರುವ ರೋಗಿಗಳ ತುರ್ತು ಸಮಯದಲ್ಲಿ ಸ್ವಯಂಪ್ರೇರಿತ ರಕ್ತದಾನದ ಗುರಿಯನ್ನು ಇರಿಸಿಕೊಳ್ಳಲಾಗಿದೆ. ರಕ್ತ ಸಂಗ್ರಹಿಸಿ ಸರಬರಾಜು ಮಾಡುವ ವ್ಯವಸ್ಥೆ ರೂಪಿತಗೊಂಡಿದೆ. ಮುಂದಿನ ದಿನಗಳಲ್ಲಿ ರಕ್ತದಾನಿಗಳ ಗ್ರಾಮಗಳನ್ನಾಗಿ ರೂಪಿಸುವ ಸಂಕಲ್ಪವಾಗಬೇಕಿದೆ. 200 ರಿಂದ 300 ಜನ ರಕ್ತದಾನಿಗಳನ್ನು ಸ್ವಯಂ ಪ್ರೇರಿತರನ್ನಾಗಿ ತಯಾರು ಮಾಡಬೇಕಿದೆ ಎಂದು ಸಲಹೆ ನೀಡಿದರು.

ಅಲಯನ್ಸ್ ಸಂಸ್ಥೆ ಅಂತಾರಾಷ್ಟ್ರೀಯ ನಿರ್ದೇಶಕ ನಾಗರಾಜು ಭೈರಿ, ಮಿಮ್ಸ್ ನಿರ್ದೇಶಕ ಡಾ.ನರಸಿಂಹಸ್ವಾಮಿ, ಅಂಗವಿಕಲರ ಕಲ್ಯಾಣಾಧಿಕಾರಿ ಕೋಮಲ್ಕುಮಾರ್, ನೆಲದನಿ ಬಳಗದ ಗೌರವಾಧ್ಯಕ್ಷೆ ರುಕ್ಮಿಣಿ, ಅಧ್ಯಕ್ಷ ಲಂಕೇಶ್ ಮಂಗಲ, ಅಲಯನ್ಸ್ ಸಂಸ್ಥೆಯ ವೈ.ಎಚ್.ರತ್ಮಮ್ಮ ಇತರರಿದ್ದರು.

ಇದೇ ವೇಳೆ ಅತಿ ಹೆಚ್ಚು ರಕ್ತದಾನ ಮಾಡಿರುವ ರಕ್ತದಾನಿಗಳನ್ನು ಅಭಿನಂದಿಸಿ ಪ್ರಮಾಣಪತ್ರ ನೀಡಲಾಯಿತು. ಅಂತೆಯೇ 30 ಜನರು ರಕ್ತದಾನ ಮಾಡಿದರು.