ಹಾಸನ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಹಾಸನ, ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಯುವ ರೆಡ್ ಕ್ರಾಸ್ ಘಟಕ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಮತ್ತು ಐಎಸ್‌ಟಿಇ ಘಟಕಗಳ ಆಶ್ರಯದಲ್ಲಿ ಗುರುವಾರ ಸ್ವಯಂಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಗುರುವಾರ ಬೆಳಗ್ಗೆ ಶಿಬಿರ ಆರಂಭಗೊಂಡಿತು. ಸಂಸದ ಶ್ರೇಯಸ್ ಎಂ.ಪಟೇಲ್ ಕಾರ್ಯಕ್ರಮ ಉದ್ಘಾಟಿಸಿದರು.
ಉದ್ಘಾಟನೆ ಬಳಿಕ ಮಾತನಾಡಿದ ಸಂಸದ ಶ್ರೇಯಸ್ ಪಟೇಲ್, ರೆಡ್‌ಕ್ರಾಸ್ ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರು. ರಕ್ತದಾನದ ಮಹತ್ವವನ್ನು ಒತ್ತಿ ಹೇಳಿದ ಅವರು, ಸ್ವಯಂಪ್ರೇರಿತ ರಕ್ತದಾನ ಶಿಬಿರಗಳನ್ನು ನಿರಂತರವಾಗಿ ಆಯೋಜಿಸುತ್ತಾ, ರೋಗಿಗಳಿಗೆ ಸಂಜೀವಿನಿಯಂತೆ ಇರುವ ಸಂಸ್ಥೆ ಎಂದರೆ ಅದು ರೆಡ್‌ಕ್ರಾಸ್ ಎಂದು ಬಣ್ಣಿಸಿದರು. ಗ್ಯಾರೆಂಟಿ ಯೋಜನೆ ಅನುಷ್ಠಾನಗಳ ಸಮಿತಿಯ ಉಪಾಧ್ಯಕ್ಷೆ ಪುಷ್ಪಾ ಅಮರನಾಥ್ ಸಹ ಭಾಗವಹಿಸಿದ್ದರು.
ಪ್ರಾಂಶುಪಾಲ ಡಾ. ಡಿ.ಪಿ.ಗಿರೀಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಶಾಖೆಯ ಸಭಾಪತಿ ಎಚ್.ಪಿ. ಮೋಹನ್, ನಿರ್ದೇಶಕ ಎಸ್.ಎಸ್. ಪಾಷಾ, ಸುಬ್ಬಸ್ವಾಮಿ, ಸುರೇಶ್, ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮ ಸಂಯೋಜಕ ಡಾ. ಎಲ್. ತಿಮ್ಮೇಶ್, ಐಎಸ್‌ಟಿಇ ಘಟಕದ ಕಾರ್ಯಕ್ರಮ ಸಂಯೋಜಕ ಡಾ.ತೀರ್ಥೇಗೌಡ, ರೆಡ್‌ಕ್ರಾಸ್ ಕಾರ್ಯದರ್ಶಿ ಶಬ್ಬಿರ್ ಅಹಮದ್, ಖಜಾಂಚಿ ಎಚ್.ಡಿ.ಜಯೇಂದ್ರ ಕುಮಾರ್ ಇದ್ದರು.