ಬೋರಗಾಂವ: ಪಟ್ಟಣದ ಸರ್ಕಲ್ ಅಗಲೀಕರಣ ಹಾಗೂ ಹೊಸ ಹೈಟೆಕ್ ಬಸ್ ನಿಲ್ದಾಣ ಅನುಕೂಲಕ್ಕಾಗಿ ಕಂದಾಯ ಇಲಾಖೆಯಿಂದ ಬಸ್ ನಿಲ್ದಾಣ ಪಕ್ಕದ ಅನಧಿಕೃತ ಹೋಟೆಲ್ ಹಾಗೂ ಡಬ್ಬಾ ಅಂಗಡಿ ತೆರವುಗೊಳಿಸುವಂತೆ ನೋಟಿಸ್ ನೀಡಿ, ಫೆಬ್ರವರಿ ಮೊದಲ ವಾರದಲ್ಲಿ ಅಂತಿಮ ಗಡುವು ನೀಡಲಾಗಿತ್ತು. ಆ ಹಿನ್ನೆಲೆಯಲ್ಲಿ ಬುಧವಾರ ಅಂಗಡಿಕಾರರು ಸ್ವಯಂಪ್ರೇರಿತವಾಗಿ ಅಂಗಡಿಗಳನ್ನು ತೆರವುಗೊಳಿಸುತ್ತಿದ್ದಾರೆ.
ಅತಿಕ್ರಮಣ ಜಾಗದಲ್ಲಿ ಸುಮಾರು 20 ಕ್ಕೂ ಹೆಚ್ಚು ಡಬ್ಬಾ ಅಂಗಡಿಗಳು ಹಾಗೂ ಹೋಟೆಲ್‌ಗಳಿವೆ. ಬೋರಗಾಂವ ಸರ್ಕಲ್‌ನಲ್ಲಿ ದಿನನಿತ್ಯ ಸಾವಿರಾರು ವಾಹನಗಳು ಓಡಾಡುತ್ತಿವೆ. ವಾಹನ ಸಂಚಾರಕ್ಕೆ ಆಗುವ ಸಮಸ್ಯೆ ಹಾಗೂ ಆಗುತ್ತಿರುವ ಅಪಘಾತ ಪರಿಗಣಿಸಿ ಪೊಲೀಸ್ ಇಲಾಖೆ, ಕಂದಾಯ ಇಲಾಖೆ ಹಾಗೂ ಪಪಂ ವತಿಯಿಂದ ಲೋಕೋಪಯೋಗಿ ಇಲಾಖೆಗೆ ಸರ್ಕಲ್ ಅಗಲೀಕರಣದ ಬಗ್ಗೆ ದೂರು ನೀಡಲಾಗಿತ್ತು. ಅದಕ್ಕೆ ಸ್ಪಂದಿಸಿದ ಇಲಾಖೆಯು ಸರ್ಕಲ್‌ನಲ್ಲಿನ ಅತಿಕ್ರಮಣ ತೆರವುಗೊಳಿಸುವ ಆದೇಶ ನೀಡಲಾಗಿತ್ತು.
ಕಂದಾಯ ಇಲಾಖೆ ಹಾಗೂ ಪಪಂ ವತಿಯಿಂದ ಮೂರು ಸಲ ನೋಟಿಸ್ ನೀಡಲಾಗಿತ್ತು. ಕಂದಾಯ ನಿರೀಕ್ಷಕ ಸಂಜಯ ನೇಮಣ್ಣವರ ಹಾಗೂ ಗ್ರಾಮ ಲೆಕ್ಕಾಧಿಕಾರಿ ಉಮೇಶ ಕೋಳಿ ಆದೇಶದ ಮೇರೆಗೆ ಬುಧವಾರ ಎಲ್ಲ ಅಂಗಡಿಕಾರರು ಸ್ವಯಂಪ್ರೇರಣೆಯಿಂದ ತಮ್ಮ ಅಂಗಡಿ ತೆರವುಗೊಳಿಸಿದರು.
ಪಟ್ಟಣದ ಅಭಿವೃದ್ಧಿಯಾಗಬೇಕೆಂದು ನಾವು ಸ್ವಯಂ ಪ್ರೇರಣೆಯಿಂದ ನಮ್ಮ ಅಂಗಡಿಗಳನ್ನು ತೆರವುಗೊಳಿಸಿದ್ದೇವೆ. ಆದರೆ ಸರ್ಕಾರ ನಮಗೆ ಬೇರೆ ಕಡೆಗೆ ಜಾಗ ಕಲ್ಪಿಸಿ ಉದ್ಯೋಗಕ್ಕೆ ಅವಕಾಶ ಮಾಡಿ ಕೊಡಬೇಕೆಂದು ಅಮರ ಮಾನೆ ಮನವಿ ಮಾಡಿದರು.
ಸ್ಥಳಕ್ಕೆ ಭೇಟಿ ನೀಡಿದ ಪಿಕೆಪಿಎಸ್ ಅಧ್ಯಕ್ಷ ಉತ್ತಮ ಪಾಟೀಲ, ವರ್ಷಗಳಿಂದ ಅಂಗಡಿಗಳ ಇಟ್ಟುಕೊಂಡು ಉದ್ಯೋಗ ಜೀವನ ಸಾಗಿಸುತ್ತಿದ್ದಾರೆ. ಬಡ ಕುಟುಂಬದ ಬೇಡಿಕೆಗೆ ಕಂದಾಯ ಇಲಾಖೆ ಅಧಿಕಾರಿಗಳು ಸ್ಪಂದಿಸಿ ಅವರಿಗೆ ಬೇರೆ ಕಡೆ ಜಾಗ ಒದಗಿಸಿ ಕೊಡಬೇಕು. ಈ ಬಗ್ಗೆ ಸಚಿವ ರಮೇಶ ಜಾರಕಿಹೊಳಿ ಜತೆ ಚರ್ಚಿಸಿ ಅಂಗಡಿಕಾರರಿಗೆ ನ್ಯಾಯ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಭರವಸೆ ನಿಡಿದರು.