ಜಿಲ್ಲೆ

ಪೂರಕ ವಾತಾವರಣದಿಂದ ಅದ್ಭುತ ಸಾಧನೆ : ಅಬ್ದುಲ್ ರಜಾಕ್ ಅನಿಸಿಕೆ

ಸೌಮ್ಯ ಆರ್

ಬಂಟ್ವಾಳ: ಯುವಪೀಳಿಗೆ ಕಾಣುವ ಕನಸುಗಳಿಗೆ ಸ್ವತಃ ಅವರೇ ಪೂರಕ ವಾತಾವರಣ ಸೃಷ್ಟಿಸಿಕೊಂಡರೆ ಸಾಧನೆ ಅದ್ಬುತವಾಗಲಿದೆ ಎಂದು ಗೋಳ್ತಮಜಲು ಜೆಮ್ ಆಂಗ್ಲ ಮಾಧ್ಯಮ ಶಾಲೆ ಅಧ್ಯಕ್ಷ ಅಬ್ದುಲ್ ರಜಾಕ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ, ಗೋಳ್ತಮಜಲು ಜೆಮ್ ಪಬ್ಲಿಕ್ ಸ್ಕೂಲ್ ಸಹಯೋಗದಲ್ಲಿ ಕಲ್ಲಡ್ಕ ವಲಯಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಾಲಿಬಾಲ್ ಟೂರ್ನಿ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನೋಡಲ್ ಅಧಿಕಾರಿ ಜಗದೀಶ್ ಕಾರ್ಯಕ್ರಮ ಉದ್ಘಾಟಿಸಿ ಶುಭಹಾರೈಸಿದರು. ಕಲ್ಲಡ್ಕ ಕ್ಲಸ್ಟರ್ ಸಿಆರ್‌ಪಿ ಜ್ಯೋತಿ, ಜೆಮ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಅಹ್ಮದ್ ಮುಸ್ತಫಾ, ಪ್ರಮುಖರಾದ ಅಲ್ತಾಫ್, ಅಬ್ದುಲ್ ಹಮೀದ್ ಗೋಳ್ತಮಜಲು, ಪ್ರಶಾಂತ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ನಿರಂಜನ್ ಸ್ವಾಗತಿಸಿದರು. ಶಿಕ್ಷಕಿಯರಾದ ಭವ್ಯಾ ಹಾಗೂ ಯಕ್ಷಿತಾ ನಿರೂಪಿಸಿದರು. ವಸಂತಿ ವಂದಿಸಿದರು.