ಜಿಲ್ಲೆ

ದಾವಿವಿ ಅಂತರಕಾಲೇಜು ವಾಲಿಬಾಲ್‌ನಲ್ಲಿ ಹೊಸದುರ್ಗ ಕಾಲೇಜು ಪ್ರಥಮ

ಹರ್ಷ ನ.ಪುರೋಹಿತ

ಚನ್ನಗಿರಿ: ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ, ದಾವಣಗೆರೆ ವಿಶ್ವವಿದ್ಯಾನಿಲಯದ ಅಂತರಕಾಲೇಜು ಪುರುಷರ ವಾಲಿಬಾಲ್ ಪಂದ್ಯಾವಳಿಯಲ್ಲಿ ಹೊಸದುರ್ಗ ಸರ್ಕಾರಿ ಪದವಿ ಕಾಲೇಜು ತಂಡ ಪ್ರಥಮ ಬಹುಮಾನ ಪಡೆದಿದೆ.

ದಾವಣಗೆರೆ ಸರ್ಕಾರಿ ಪದವಿ ಕಾಲೇಜು ದ್ವಿತೀಯ, ಹೊನ್ನಾಳಿ ಪದವಿ ಕಾಲೇಜು ಹಾಗೂ ಚನ್ನಗಿರಿ ಪದವಿ ಕಾಲೇಜುಗಳು ಕ್ರಮವಾಗಿ ತೃತೀಯ ಹಾಗೂ ಚತುರ್ಥ ಬಹುಮಾನ ಪಡೆದವು.

ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಒಟ್ಟು 24 ಪದವಿ ಕಾಲೇಜುಗಳ ತಂಡಗಳು ಭಾಗವಹಿಸಿದ್ದವು. ಪುರುಷರ ಮತ್ತು ಮಹಿಳೆಯರ ವಿಶ್ವವಿದ್ಯಾಲಯದ ತಂಡಕ್ಕೆ 12 ಆಟಗಾರರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.

ಇದೇ ವೇಳೆ ಸಂತೇಬೆನ್ನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೇಣುಕಾ ಮೂರ್ತಪ್ಪ ಮಾತನಾಡಿ, ಕ್ರೀಡೆಗಳಲ್ಲಿ ಸೋಲು-ಗೆಲುವಿನ ಫಲಿತಾಂಶಕ್ಕಿಂತಲೂ ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು.

ದಾವಣಗೆರೆ ವಿವಿ ದೈಹಿಕ ಶಿಕ್ಷಣ ನಿರ್ದೇಶಕಿ ಡಾ.ಎಂ.ಆರ್. ರೇಖಾ ಮಾತನಾಡಿ, ನಮ್ಮ ವಿಶ್ವವಿದ್ಯಾಲಯಗಳಲ್ಲಿ ಮತ್ತು ಗ್ರಾಮಾಂತರ ಕಾಲೇಜುಗಳಲ್ಲಿ ಸುಸಜ್ಜಿತ ಸಿಂಥೆಟಿಕ್ ಕ್ರೀಡಾಂಗಣ ಇದ್ದರೆ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡುತ್ತಾರೆ ಎಂದರು.

ಸಮಾರಂಭದಲ್ಲಿ ಪ್ರಾಚಾರ್ಯ ಎಚ್. ಗಿರಿಸ್ವಾಮಿ, ವಿವಿ ಕ್ರೀಡಾಧಿಕಾರಿ ಡಾ. ವೀರಪ್ಪ, ವಿಎಸ್‌ಎಸ್ ಮಾಜಿ ಅಧ್ಯಕ್ಷ ಕೃಷ್ಣಮೂರ್ತಿ, ಸುರೇಶ್ ಗೌಡ್ರು, ಇಮ್ತಿಯಾಜ್ ಅಹಮದ್, ಸಿಡಿಸಿ ಸದಸ್ಯರಾದ ಕೆ.ಪಿ. ಗಿರೀಶ್, ಸಿರಾಜ್ ಅಹಮದ್, ಟಿ.ಎನ್. ರೇವಣ್ಣ, ಗೌಡ್ರು ಸ್ವಾಮಿ, ಎಚ್.ಎಸ್. ಪ್ರಕಾಶ್, ಡಾ. ವೀರೇಂದ್ರ, ಬಾಲಚಂದರ್, ಒಡೆಯರ್, ಯತೀಶ್, ವಿಜಯ್‌ಕುಮಾರ್ ಇದ್ದರು.