ಜಿಲ್ಲೆ

ಒಕ್ಕಲಿಗರ ಕಪ್ ಮ್ಯಾಟ್ ಕಬಡ್ಡಿಗೆ ಚಾಲನೆ

ಕಿರಣ್ ಗೌಡ.ಜಿ

ಸೋಮವಾರಪೇಟೆ: ಒಕ್ಕಲಿಗರ ಯುವ ವೇದಿಕೆ, ರಾಜ್ಯ ಮತ್ತು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ವತಿಯಿಂದ ಮೂರು ದಿನಗಳ ಕಾಲ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಅಯೋಜಿಸಿರುವ ರಾಷ್ಟ್ರ ಮಟ್ಟದ ಹೊನಲು ಬೆಳಕಿನ 5ನೇ ವರ್ಷದ ಒಕ್ಕಲಿಗರ ಕಪ್ ಮ್ಯಾಟ್ ಕಬಡ್ಡಿ ಪಂದ್ಯಾಟಕ್ಕೆ ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಶುಕ್ರವಾರ ಚಾಲನೆ ನೀಡಿದರು.

ಕೋವಿಡ್ ಸಂದರ್ಭದಲ್ಲಿ ಹೊರತುಪಡಿಸಿ, ಸತತ 4 ವರ್ಷಗಳಿಂದಲೂ ವ್ಯವಸ್ಥಿತವಾಗಿ ಕಬಡ್ಡಿ ಪಂದ್ಯಾವಳಿಗಳನ್ನು ನಡೆಸಿಕೊಂಡು ಬರುತ್ತಿರುವುದು ಶ್ಲಾಘನೀಯವಾಗಿದೆ. ಗ್ರಾಮೀಣ ಕ್ರೀಡೆಗಳು ನಶಿಸದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮುಂದಿನ ಪೀಳಿಗೆಗೂ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು ಎಂದು ಹೇಳಿದರು.

ಸೋಮವಾರಪೇಟೆಯಲ್ಲಿ ಒಳಾಂಗಣ ಕ್ರೀಡಾಂಗಣ ಅವಶ್ಯಕತೆಯಿದೆ. ಸೌಲಭ್ಯಗಳ ಕೊರತೆಯಿಂದ ಗ್ರಾಮೀಣ ಪ್ರತಿಭೆಗಳಿಗೆ ಹಿನ್ನಡೆಯಾಗುತ್ತಿದೆ. ಒಕ್ಕಲಿಗರ ಯುವವೇದಿಕೆ ಈ ಬಗ್ಗೆ ಗಂಭೀರವಾಗಿ ತೆಗೆದುಕೊಂಡು ಶ್ರಮಪಡಬೇಕು. ಖಂಡಿತವಾಗಿಯೂ ಜನಪ್ರತಿನಿಧಿಗಳು ಮತ್ತು ಸರ್ಕಾರ ನಿಮಗೆ ಸಹಕಾರ ನೀಡಲಿದೆ ಎಂದು ಹೇಳಿದರು.

ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್.ಮುತ್ತಣ್ಣ ಮಾತನಾಡಿ, ಪಟ್ಟಣ ವ್ಯಾಪ್ತಿಯಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣಕ್ಕೆ ಯುವವೇದಿಕೆಯೊಂದಿಗೆ ಕೈಜೋಡಿಸಲಾಗುವುದು ಎಂದು ಭರವಸೆ ನೀಡಿದರು.

ವೇದಿಕೆಯಲ್ಲಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಕೆ.ಬಿ.ಸುರೇಶ್, ಗೌರವಾಧ್ಯಕ್ಷ ಬಿ.ಜೆ.ದೀಪಕ್, ಚೌಡ್ಲು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನತೀಶ್ ಮಂದಣ್ಣ, ಪಿಡಿಒ ರವಿ ನಾಯರ್, ಜಿಪಂ ಮಾಜಿ ಸದಸ್ಯೆ ಪೂರ್ಣಿಮಾ ಗೋಪಾಲ್, ತಾಪಂ ಮಾಜಿ ಸದಸ್ಯರಾದ ತಂಗಮ್ಮ ಪ್ರಮುಖರಾದ ಪಿ.ಕೆ.ರವಿ, ಮಂಜೂರು ತಮ್ಮಣ್ಣಿ, ರಮೇಶ್, ಗೌಡಳ್ಳಿ ಪೃಥ್ವಿ ಮತ್ತಿತರರು ಇದ್ದರು.