ಜಿಲ್ಲೆ

ಮೀಸಲಾತಿಗಾಗಿ ಬೀದಿಗಿಳಿದ ಒಕ್ಕಲಿಗರು: ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ನೇತೃತ್ವ

reportermys

ಮದ್ದೂರು: ರಾಜ್ಯದಲ್ಲಿ ಮೀಸಲಾತಿಯ ಕೂಗು ತೀವ್ರಗೊಳ್ಳುತ್ತಿರುವ ನಡುವೆ ಒಕ್ಕಲಿಗ ಸಮುದಾಯದವರು ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಜತೆಗೆ ಸಮುದಾಯದ ಬೇಡಿಕೆಗೆ ಸ್ಪಂದಿಸದಿದ್ದರೆ ತೀವ್ರ ಹೋರಾಟದ ಎಚ್ಚರಿಕೆ ಸಂದೇಶವನ್ನು ರಾಜ್ಯ ಸರ್ಕಾರಕ್ಕೆ ರವಾನಿಸಲಾಯಿತು.

ಶಿಕ್ಷಣ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಒಕ್ಕಲಿಗರಿಗೆ ಮೀಸಲಾತಿ ನೀಡಬೇಕು. ಒಕ್ಕಲಿಗ ಜನಾಂಗಕ್ಕೆ ನೀಡುತ್ತಿರುವ ಶೇ.4ನಿಂದ 12ಕ್ಕೆ ಮೀಸಲಾತಿ ಹೆಚ್ಚಿಸಬೇಕೆಂದು ಸ್ಫಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ ನೇತೃತ್ವದಲ್ಲಿ ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘ, ಜೆಡಿಎಸ್, ಕಾಂಗ್ರೆಸ್ ಕಾರ್ಯಕರ್ತರು ಸೇರಿದಂತೆ ಪಕ್ಷತೀತವಾಗಿ ಹಾಗೂ ಸಮುದಾಯದ ಜನರು ಪ್ರತಿಭಟನೆ ಭಾಗಿಯಾದರು. ಪಟ್ಟಣದ ಪ್ರವಾಸಿ ಮಂದಿರದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಪ್ರಮುಖ ಬೀದಿಗಳ ಮೂಲಕ ಸಾಗಿ ನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಮುಕ್ತಾಯವಾಯಿತು. ಈ ವೇಳೆ ಕಾಲ್ನಡಿಗೆ ಜಾಥಾ ಹಾಗೂ ಬೈಕ್ ರ‌್ಯಾಲಿ ನಡೆಯಿತು. ಒಂದು ಸಾವಿರಕ್ಕೂ ಹೆಚ್ಚು ಜನರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ನಾಡಪ್ರಭು ಕೆಂಪೇಗೌಡ ಒಕ್ಕಲಿಗರ ಸಂಘದ ಅಧ್ಯಕ್ಷ ದೇಶಹಳ್ಳಿ ಪಿ.ಶಿವಪ್ಪ, ಗೌರವಾಧ್ಯಕ್ಷ ಡಾ.ಬಿ.ಕೃಷ್ಣ, ಉಪಾಧ್ಯಕ್ಷ ಸಿ.ಎಸ್.ಶಂಕರಯ್ಯ, ಕಾರ್ಯದರ್ಶಿ ಸಿ.ಸುರೇಶ್, ಸಂಘಟನಾ ಕಾರ್ಯದರ್ಶಿ ಡಿ.ಸಿ.ಮಹೇಶ್, ಚಂದ್ರಶೇಖರ್, ರವಿಕುಮಾರ್, ಕೆಪಿಸಿಸಿ ಸದಸ್ಯ ಗುರುಚರಣ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕದಲೂರು ರಾಮಕೃಷ್ಣ, ಡಿಸಿಸಿ ನಿರ್ದೇಶಕ ಸಂದರ್ಶ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಸನ್ನ, ಸದಸ್ಯರಾದ ಪ್ರಿಯಾಂಕ ಅಪ್ಪುಗೌಡ, ಸರ್ವಮಂಗಳಾ, ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಅಧ್ಯಕ್ಷ ರಮೇಶ್‌ಗೌಡ, ವಿ.ಸಿ.ಉಮಾಶಂಕರ್, ಮನ್‌ಮುಲ್ ನಿರ್ದೇಶಕಿ ರೂಪಾ, ಟಿಎಪಿಸಿಎಂಎಸ್ ಉಪಾಧ್ಯಕ್ಷ ರಘು, ಕರವೇ ತಾಲೂಕು ಅಧ್ಯಕ್ಷ ಅಶೋಕ, ಮಾದನಾಯ್ಕನಹಳ್ಳಿ ರಾಜಣ್ಣ, ತಿಪ್ಪೂರು ರಾಜೇಶ್ ಇತರರಿದ್ದರು.

ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ: ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ನಂಜಾವಧೂತ ಸ್ವಾಮೀಜಿ ಮಾತನಾಡಿ, ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ನಮಗೆ ರಾಮ ಮತ್ತು ಕೃಷ್ಣರಂತೆ ಬದುಕುವುದು ಗೊತ್ತು. ಅಂತೆಯೇ ಉಗ್ರ ನರಸಿಂಹ ಅವತಾರ ತಾಳುವುದು ಗೊತ್ತು. ಒಕ್ಕಲಿಗ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಹೋರಾಟ ಆರಂಭವಾಗಿದೆ. ಮಂಡ್ಯದ ಮದ್ದೂರಿನಲ್ಲಿ ನಮ್ಮ ಹೋರಾಟಕ್ಕೆ ಚಾಲನೆ ಸಿಕ್ಕಿದೆ. ನಮ್ಮದು 30 ವರ್ಷಗಳ ಹಿಂದಿನ ಬೇಡಿಕೆ ಎಂದರು.

ಎಲ್ಲ ಸಮುದಾಯಗಳ ಹಿತ ಬಯಸುವವರು ಒಕ್ಕಲಿಗರು. ಆದರೆ ಒಕ್ಕಲಿಗರಿಗೆ ಮೀಸಲಾತಿ ತಾರತಮ್ಯ ಆಗಿದೆ. ನಾವು ಶೇ.16 ಜನಸಂಖ್ಯೆ ಇದ್ದರೂ ತಾರತಮ್ಯ ಮಾಡಲಾಗುತ್ತಿದೆ. 3ಎ ಅಡಿ ಶೇ.4ರಷ್ಟು ಮೀಸಲಾತಿ ನೀಡಲಾಗಿದೆ. ಆದರೆ 3ಎ ಅಡಿ ಬೇರೆ ಸಮುದಾಯವನ್ನು ಸೇರಿಸಲಾಗಿದೆ. ಕೊಟ್ಟಿರುವ ಮೀಸಲಾತಿಯನ್ನು ಒಕ್ಕಲಿಗರು ಬಳಸಿಕೊಳ್ಳಲು ಆಗುತ್ತಿಲ್ಲ. ಶೈಕ್ಷಣಿಕ, ಔದ್ಯೋಗಿಕವಾಗಿ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ. 3ಎ ಮೀಸಲಾತಿಯನ್ನು ಶೇ.12ಕ್ಕೆ ಹೆಚ್ಚಿಸಬೇಕು. ನಗರ ಪ್ರದೇಶದಲ್ಲಿರುವ ಒಕ್ಕಲಿಗರಿಗೆ ಒಬಿಸಿ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.

ಬೇರೆ ಬೇರೆ ಸಮುದಾಯಕ್ಕೆ ನೀಡಿ ಮೀಸಲಾತಿ ಸ್ವಾಗತಾರ್ಹ. ಆದರೆ ನಮಗೂ ನಮ್ಮ ಪಾಲು ನೀಡಬೇಕು. ಸರ್ಕಾರ ನಮ್ಮನ್ನ ಯಾವ ರೀತಿ ನಡೆಸಿಕೊಳ್ಳುತ್ತೋ ಆ ರೀತಿ ನಡೆಯುತ್ತೇವೆ. ನಮ್ಮ ತಾಳ್ಮೆ ಪರೀಕ್ಷೆ ಮಾಡಬೇಡಿ. ಮುಂದಿನ ದಿನಗಳ ಹೋರಾಟ ಯಾವ ರೂಪ ಬೇಕಾದರೂ ತಾಳಬಹುದು. ಚುನಾವಣೆಗೂ ಈ ಹೋರಾಟಕ್ಕೂ ಸಂಬಂಧ ಇಲ್ಲ. ಎಲ್ಲ ಪಕ್ಷಗಳಿಗೂ ಸಮುದಾಯ ಒತ್ತು ನೀಡಿದೆ. ಎಲ್ಲರೂ ಒಟ್ಟಾಗಿ ಸಮಸ್ಯೆ ಬಗೆಹರಿಸಬೇಕು. ಒಕ್ಕಲಿಗರು ಶಾಂತಸಾಗರ ಯಾವಾಗ ಬೇಕಾದರೂ ಅಲೆಗಳು ಎದ್ದೇಳಬಹುದು. ಇದು ಸಣ್ಣ ಕಿಡಿ, ಈ ಕಿಡಿ ಅನ್ನವನ್ನು ಬೇಯಿಸುತ್ತದೆ. ಅಥವಾ ಬೇರೆ ರೀತಿಯಲ್ಲೂ ಕಿಡಿ ಹೊತ್ತಿಉರಿಯಬಹುದು ಎಂದು ಎಚ್ಚರಿಕೆ ನೀಡಿದರು.