ಜಿಲ್ಲೆ

ಮೀಸಲಾತಿಗಾಗಿ ಹೋರಾಟ ಅನಿವಾರ್ಯ: ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿಕೆ

reportermys

ಮಂಡ್ಯ: ಒಕ್ಕಲಿಗ ಸಮಾಜವು ಹೋರಾಟಕ್ಕೆ ಸಿದ್ಧವಾಗಬೇಕು. ನಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕಾದರೆ ಹೋರಾಟದ ಅನಿವಾರ್ಯ ಇದ್ದೇ ಇರುತ್ತದೆ ಎಂದು ಮಾಜಿ ಸಚಿವ, ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಹೇಳಿದರು.

ನಗರದ ಗಾಂಧಿಭವನದಲ್ಲಿ ವಿಶ್ವ ಒಕ್ಕಲಿಗರ ಜನ ಜಾಗೃತಿ ಸಂಘ, ಒಕ್ಕಲಿಗ ಧರ್ಮ ಮಹಾಸಭಾದ ವತಿಯಿಂದ ಸೋಮವಾರ ಆಯೋಜಿಸಿದ್ದ ಒಕ್ಕಲಿಗರ ಜನಸಂಖ್ಯಾ ಆಧಾರದ ಮೇಲೆ ಶೇ.18 ರಷ್ಟು ಮೀಸಲಾತಿಗಾಗಿ ಸರ್ಕಾರವನ್ನು ಆಗ್ರಹಿಸಿ ಪತ್ರ ಚಳವಳಿ ಹಾಗೂ ಪ್ರಚಾರಾಂದೋಲನ ಭಿತ್ತಿ ಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಒಕ್ಕಲಿಗರ ಸಮಾಜದ ವಿದ್ಯಾರ್ಥಿಗಳು ಮೀಸಲಾತಿಯಲ್ಲಿ ಹೇಗೋ ಕಷ್ಟಪಟ್ಟು ಕೆಲಸ ತೆಗೆದುಕೊಂಡಿದ್ದಾರೆ. ಇಂತಹ ಹರಸಾಹಸವನ್ನು ಎಲ್ಲಿತನಕ ಮಾಡಬೇಕು. ಇನ್ನಾದರೂ ಒಕ್ಕಲಿಗ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗಬೇಕು. ನಮ್ಮ ಸಮುದಾಯದ ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳ ಮಾಡಬೇಕು. ಈ ಮೂಲಕ ಮುಖ್ಯವಾಹಿನಿಗೆ ನಮ್ಮ ಸಮುದಾಯ ಬರಬೇಕು. ಪ್ರಶ್ನೆ ಮಾಡುವ ಬೆಳವಣಿಗೆ ಆಗಬೇಕು ಎಂದು ಸಲಹೆ ನೀಡಿದರು.

ಆರ್ಥಿಕವಾಗಿ ಹಿಂದುಳಿದಿರುವ ಒಕ್ಕಲಿಗರ ಸಮುದಾಯಕ್ಕೆ ಮೀಸಲಾತಿಯನ್ನು ಸರ್ಕಾರ ಹೆಚ್ಚಳ ಮಾಡಬೇಕು. ಸಮುದಾಯದಲ್ಲಿ ರೈತರು, ಯುವಕರು ಸೇರಿದಂತೆ ಎಲ್ಲರಿಗೂ ಅನ್ಯಾಯವಾಗುತ್ತಿದೆ. ಪಕ್ಷದ ವರಿಷ್ಠರನ್ನು ನಾವೆಲ್ಲರೂ ಒಪ್ಪಿಸುವ ಮೂಲಕ ಹೋರಾಟ ಮಾಡೋಣ, ಚುಂಚಶ್ರೀಗಳ ಆಶೀರ್ವಾದ ಹಾಗೂ ಅವರ ಸಲಹೆ ಮೇರೆಗೆ ಹೋರಾಟಕ್ಕೆ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದು ಹೇಳಿದರು.

ಮೀಸಲಾತಿ ಹೋರಾಟ ನಮ್ಮ ಸಮುದಾಯಕ್ಕೆ ಸಿಗಬೇಕು. ಒಕ್ಕಲಿಗರು ಯಾವುದೇ ಸಮಾಜವನ್ನು ಕಡೆಗಣಿಸಿಲ್ಲ. ಅಂತೆಯೇ ಯಾರನ್ನೂ ತೇಜೋವಧೆ ಮಾಡುವುದಿಲ್ಲ. ರೈತರ ಪರವಾಗಿರುವುದು ಒಕ್ಕಲಿಗರ ಸಮುದಾಯವಾಗಿದೆ. ಆದರೆ, ನಮ್ಮ ಸಮುದಾಯಕ್ಕೆ ನ್ಯಾಯ ಕೊಡಿ ಎಂಬ ಕೂಗು ಬರುತ್ತಿದೆ. ಬೇರೆ ಸಮಾಜಕ್ಕೆ ಹೋಲಿಸಿಕೊಂಡರೆ ಒಕ್ಕಲಿಗರ ಸಮಾಜವು ಹೋರಾಟದಲ್ಲಿ ಹಿಂದೆ ಉಳಿದಿದೆ ಎಂದು ವಿಷಾದಿಸಿದರು.

ಕುಣಿಗಲ್ ಅರೇ ಶಂಕರ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಸಿದ್ದರಾಮ ಚೈತನ್ಯ ಸ್ವಾಮೀಜಿ ಮಾತನಾಡಿ, ಇಡೀ ಭಾರತದಲ್ಲಿ ಎರಡು ರೀತಿಯ ಮೀಸಲಾತಿಯಿದೆ. ಒಂದು ಧರ್ಮಾಧಾರಿತ ಮೀಸಲಾತಿ, ಮತ್ತೊಂದು ಜಾತ್ಯತೀತ ಮೀಸಲಾತಿ ಇದೆ. ಧರ್ಮಾಧಾರಿತ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಸಮುದಾಯಕ್ಕೆ ಇದೆ. ಜಾತಿವಾರುಗಳಿಗೆ ಬಂದರೆ ಅದರಲ್ಲಿಯೂ ಕರ್ನಾಟಕದಲ್ಲಿ ಒಕ್ಕಲಿಗರ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದರು.

ಒಕ್ಕಲಿಗರ ಸಮುದಾಯ ಮೆಡಿಕಲ್, ಇಂಜಿನಿಯರಿಂಗ್ ಸೇರಿದಂತೆ ವಿವಿಧ ತಾಂತ್ರಿಕ ವಿಷಯಗಳಲ್ಲಿ ಅನ್ಯ ಸಮುದಾಯದ ವಿದ್ಯಾರ್ಥಿಗಿಂತ ಹೆಚ್ಚು ಅಂಕ ಪಡೆದಿದ್ದರೂ ಸಹ ಉನ್ನತ ವ್ಯಾಸಂಗಕ್ಕೆ ಅವಕಾಶ ಸಿಗುವುದಿಲ್ಲ. ಕಡಿಮೆ ಅಂಕಪಡೆದಿರುವ ಬೇರೆ ಸಮುದಾಯದ ವಿದ್ಯಾರ್ಥಿಗಳಿಗೆ ಅವಕಾಶ ಸಿಗುತ್ತಿದೆ. ಕೇವಲ ಒಕ್ಕಲಿಗರ ಪ್ರಭಾವಿಗಳು ಎಂಬುದರಲ್ಲಿಯೇ ಮುಳುಗಿ ಹೋಗಿದ್ದೇವೆ. ಹಾಗಾಗಿ, ಮೀಸಲಾತಿ ಹೆಚ್ಚಳಕ್ಕೆ ಪ್ರತಿಭಟನೆ ಆರಂಭಿಸಬೇಕು ಎಂದು ಆಗ್ರಹಿಸಿದರು.

ರಾಷ್ಟ್ರೀಯ ಯುವ ಪ್ರಶಸ್ತಿ ಪುರಸ್ಕೃತ ಎಂ.ಜಿ.ಸಿದ್ಧಾರೂಢ (ಸತೀಶ್‌ಗೌಡ), ಕಸ್ತೂರಿ ಕನ್ನಡ ಜನಪರ ವೇದಿಕೆಯ ರಾಜ್ಯಾಧ್ಯಕ್ಷ ರಮೇಶ್‌ಗೌಡ, ವಿಶ್ವ ಒಕ್ಕಲಿಗರ ಜನಜಾಗೃತಿ ಸಂಘದ ರಾಜ್ಯಾಧ್ಯಕ್ಷ ಕೆ.ಎಂ.ರಾಮಕೃಷ್ಣ, ಕರುನಾಡು ಸೇವಕರು ಸಂಘಟನೆ ಮೈಸೂರು ವಿಭಾಗೀಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ, ಮುಖಂಡರಾದ ಸಿ.ಎಂ.ಕ್ರಾಂತಿ ಸಿಂಹ, ಉಮಾಶಂಕರ್, ಶಿವಲಿಂಗೇಗೌಡ, ಲಕ್ಷ್ಮೀ, ಮಂಜುಳಾ, ಬೋರೇಗೌಡ ಇತರರಿದ್ದರು.