ಜಿಲ್ಲೆ

ಒಕ್ಕಲಿಗ ಸಮುದಾಯದವರು ಒಗ್ಗಟ್ಟಾಗಬೇಕು : ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕರೆ

ಮೈಸೂರು: ಒಕ್ಕಲಿಗರಲ್ಲಿ ಒಗ್ಗಟ್ಟಿನ ಕೊರತೆ ಇದ್ದು, ಒಕ್ಕಲಿಗರನ್ನು ಒಕ್ಕಲಿಗರೇ ತುಳಿಯುತ್ತಿದ್ದಾರೆ. ಸಮುದಾಯದ ಅಭಿವೃದ್ಧಿಗೆ ಸಮುದಾಯ ಒಗ್ಗೂಡುವ ಅವಶ್ಯಕತೆ ಇದೆ ಎಂದು ಬೆಂಗಳೂರಿನ ಕೆಂಗೇರಿಯ ವಿಶ್ವ ಒಕ್ಕಲಿಗರ ಮಠದ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರನಾಥ ಸ್ವಾಮೀಜಿ ಕರೆ ನೀಡಿದರು.

ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ವತಿಯಿಂದ ನಗರದ ಮಾನಸಗಂಗೋತ್ರಿಯ ರಾಣಿಬಹದ್ದೂರ್ ಸಭಾಂಗಣದಲ್ಲಿ ‘ನಾಡಪ್ರಭು ಕೆಂಪೇಗೌಡ ಮತ್ತು ಒಕ್ಕಲಿಗ ರಾಜಮನೆತನದ ಇತಿಹಾಸ’ ಕುರಿತು ಎರಡು ದಿನಗಳ ಕಾಲ ಹಮ್ಮಿಕೊಂಡ ವಿಚಾರ ಸಂಕಿರ ಣದ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿ, ಒಕ್ಕಲಿಗರು ಬೇರೆ ಸಮುದಾಯಕ್ಕೆ ನೆರವಾಗುತ್ತಾರೆ. ಎಲ್ಲ ಸಮುದಾಯಗಳನ್ನು ಒಟ್ಟಿಗೆ ಕರೆದೊಯ್ಯುವ ಉತ್ತಮ ಗುಣ ಒಕ್ಕಲಿಗರಲ್ಲಿ ಇದೆ. ಇತರೆ ಸಮುದಾಯಕ್ಕೆ ನೆರವಾಗುವ ರೀತಿಯಲ್ಲಿ ನಮ್ಮ ಸಮು ದಾಯದವರಿಗೂ ನೆರವು ನೀಡುವ ಕಾರ್ಯವನ್ನು ಒಕ್ಕಲಿಗರು ಮಾಡಬೇಕು. ಸಮುದಾಯದವರಲ್ಲಿ ಒಗ್ಗಟ್ಟು ಇರಬೇಕು, ಧ್ವೇಷ ಅಸೂಯೆ ಇರಬಾರದು. ನಾವು ಬದುಕುವ ಜತೆಗೆ ಇತರರು ಬದುಕಲು ಅವಕಾಶ ಮಾಡಿಕೊಡಬೇಕು ಎಂದು ಹೇಳಿದರು.

ಕೆಂಪೇಗೌಡ ಜಯಂತಿಯನ್ನು ಈ ಹಿಂದೆ ಎಲ್ಲ ಕಡೆಗಳಲ್ಲಿ ಆಚರಿಸುತ್ತಿರಲಿಲ್ಲ. ಜೇಡರಹಳ್ಳಿ ಕೃಷ್ಣಪ್ಪ ಅವರು ಕೆಂಪೇಗೌಡ ಜಯಂತಿ ಪ್ರಾರಂಭಿಸಿದರು. ಆ ನಂತರ ಸರ್ಕಾರ ಕೆಂಪೇಗೌಡರ ಜಯಂತಿ ಆಚರಿಸಲು ಪ್ರಾರಂಭಿಸಿತು. ಇದೀಗ ಹಳ್ಳಿ ಹಳ್ಳಿಗಳಲ್ಲೂ ಕೆಂಪೇಗೌಡರ ಜಯಂತಿ ನಡೆಯುತ್ತಿದೆ. ಕೆಂಪೇಗೌಡರು ಎಲ್ಲ ಸಮುದಾಯವನ್ನು ಸಮಾನವಾಗಿ ಕಾಣುತ್ತಿದ್ದರು ಎಂದು ಹೇಳಿದರು.

ಹಂಪಿಯ ವಿಜಯನಗರ ಸಾಮ್ರಾಜ್ಯಕ್ಕೆ ಕೆಂಪೇಗೌಡರು ಭೇಟಿ ನೀಡಿದ ಸಂದರ್ಭ ಅಲ್ಲಿನ ವೈಭವವನ್ನು ಕಂಡು ಅದೇ ಮಾದರಿಯಲ್ಲಿ ಬೆಂಗಳೂರನ್ನು ನಿರ್ಮಾಣ ಮಾಡಬೇಕು ಎಂದು ಸಂಕಲ್ಪ ತೊಟ್ಟು ಬೆಂಗಳೂರನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಕೈ ಹಾಕಿದರು. ಅವರು ಒಟ್ಟು 64 ಪೇಟೆಗಳನ್ನು ನಿರ್ಮಾಣ ಮಾಡಿದರು. ಆ ನಂತರ ಹಲವು ಕೆರೆಗಳನ್ನು ನಿರ್ಮಾಣ ಮಾಡಿದರು. ಕೆಂಪೇಗೌಡರು ನಿರ್ಮಿಸಿದ ಬೆಂಗಳೂರಿನಲ್ಲಿ ಇಂದು ಹಲವರು ಉತ್ತಮ ಬದುಕು ರೂಪಿಸಿಕೊಂಡಿದ್ದಾರೆ ಎಂದು ಹೇಳಿದರು.