ಸುರೇಶ್ ಬಾಬು 
ಜಿಲ್ಲೆ

23ರಂದು ಗ್ರಾಮೀಣ ಪ್ರತಿಭೆಗಳ ಧ್ವನಿ ಪರೀಕ್ಷೆ ಸ್ಪರ್ಧೆ

ಹುಣಸೂರು: ಬೆಂಗಳೂರಿನ ಕುಹೂ ಕುಹೂ ಕರ್ನಾಟಕ ಕನ್ನಡ ಕರೋಕೆ ಗಾಯನ ಸಂಸ್ಥೆ ಮತ್ತು ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ಮತ್ತು ತರಬೇತಿ ಸಂಸ್ಥೆ ಸಹಯೋಗದಲ್ಲಿ ನ.23ರಂದು ನಗರದ ಆರ‌್ಯವೈಶ್ಯ ಕಲ್ಯಾಣಮಂಟಪದಲ್ಲಿ ಗ್ರಾಮೀಣ ಪ್ರತಿಭೆಗಳ ಧ್ವನಿಪರೀಕ್ಷೆ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಕುಹೂ ಕುಹೂ ಸಂಸ್ಥೆಯ ನಿರ್ದೇಶಕ ಸುರೇಶ್ ಬಾಬು ತಿಳಿಸಿದರು.

ಕುಹೂ ಕುಹೂ ಸಂಸ್ಥೆ ರಾಜ್ಯದಲ್ಲಿ 25 ಜಿಲ್ಲೆಗಳಲ್ಲಿ ಈಗಾಗಲೇ ಕರೋಕೆ ಗಾಯನ ಸ್ಪರ್ಧೆಗಳನ್ನು ಯಶಸ್ವಿಯಾಗಿ ಆಯೋಜಿಸಿದೆ. ಗ್ರಾಮೀಣ ಭಾಗದ ಗಾಯನ ಕಲಿಕಾಸಕ್ತರಿಗೆ ನಗರಪ್ರದೇಶದ ಗಾಯಕರಂತೆ ಅವಕಾಶಗಳು ಇಲ್ಲದ ಕಾರಣದಿಂದ ಕರೋಕೆ ಮೂಲಕ ಗ್ರಾಮೀಣ ಪ್ರತಿಭೆಗಳಿಗೆ ಅವಕಾಶ ಮಾಡಿಕೊಡುವ ಸದುದ್ದೇಶದಿಂದ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ತಂತ್ರಜ್ಞಾನ ಅಂಗೈಯಲ್ಲಿ ಪ್ರಪಂಚವನ್ನು ತೋರುತ್ತಿದ್ದು, ಕರೋಕೆ ಮೂಲಕ ಗ್ರಾಮೀಣ ಪ್ರತಿಭೆಗಳು ಹೊರಬರಲಿ ಎನ್ನುವುದೇ ನಮ್ಮ ಉದ್ದೇಶ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೈಸೂರು ಕೋಗಿಲೆ: ಕುಹೂ ಕುಹೂ ಕನ್ನಡ ಕರೋಕೆ ಗಾಯನ ಪ್ರತಿಭಾ ಶೋಧ ಕಾರ್ಯಕ್ರಮದಡಿ ಜಿಲ್ಲಾ ಮಟ್ಟದ ಕುಹೂ ಕುಹೂ ಮೈಸೂರು ಕೋಗಿಲೆಗಾಗಿ ಸ್ಪರ್ಧೆ, ಡಾ.ಪುನೀತ್ ರಾಜ್‌ಕುಮಾರ್ ಅವಾರ್ಡ್ ಕಾರ್ಯಕ್ರಮವನ್ನು ಖ್ಯಾತ ಸಂಗೀತ ನಿರ್ದೇಶಕ ಗುರುಕಿರಣ್, ಗಾಯಕಿ ಶಮಿತಾ ಮಲ್ನಾಡ್ ಮುಂತಾದ ಪ್ರಖ್ಯಾತರ ಸಮ್ಮುಖದಲ್ಲಿ ನಡೆಯಲಿದೆ.

ಪಿರಿಯಾಪಟ್ಟಣದಲ್ಲಿ ಧ್ವನಿ ಪರೀಕ್ಷೆಯು ನ.24ರಂದು ದೇವರಾಜ ಅರಸು ಕಲಾಭವನದಲ್ಲಿ ಆಯೋಜಿಸಲಾಗಿದೆ. ಮೈಸೂರಿನ ಮುಕ್ತ ವಿವಿಯ ಗಂಗಾ ಸಭಾಂಗಣದಲ್ಲಿ ಧ್ವನಿಪರೀಕ್ಷೆಯು ನ.16, 30, ಡಿ.7 ಮತ್ತು 14ರಂದು ಆಯೋಜನೆಗೊಂಡಿದೆ. ಡಿ.15ರ ಭಾನುವಾರ ಗ್ರ್ಯಾಂಡ್ ಫಿನಾಲೆಯು ಮೈಸೂರು ವಿವಿಯ ಘಟಿಕೋತ್ಸವ ಭವನದಲ್ಲಿ ಮಧ್ಯಾಹ್ನ 3.30ಕ್ಕೆ ಆಯೋಜನೆಗೊಂಡಿದೆ. ಸ್ಪರ್ಧಿಗಳಿಗೆ 300 ರೂ. ಪ್ರವೇಶ ಶುಲ್ಕ ನೀಡಬೇಕಿದೆ. 10 ಕರೋಕೆ ಟ್ರ್ಯಾಕ್ ಉಚಿತವಾಗಿ ನೀಡಲಾಗುವುದು, ಹೆಚ್ಚಿನ ಮಾಹಿತಿಗಾಗಿ ಮೊ: 9448436388, 9380715414 ಸಂಪರ್ಕಿಸಬಹುದು.

ಸಂಸ್ಥೆಯ ರಾಜಕೀಯ ರವಿ, ಪ್ರಿಯಾ ಗೌಡ, ಗಣೇಶ್ ಮತ್ತು ಸಿ.ಜೆ.ಫಾಲಾಕ್ಷ ಗೌಡ ಇದ್ದರು.