ಮಂಡ್ಯ: ಕನ್ನಡದ ಮೊದಲ ವಚನಕಾರ ಶಿವನೊಡನೆ ಹಂಬಲಿ ಕುಡಿದವ, ಘನಶಿವಶರಣ ಮಾದಾರ ಚನ್ನಯ್ಯ ಕುರಿತು ನಗರದ ಗಾಂಧಿಭವನದಲ್ಲಿ ಆಯೋಜಿಸಿದ್ದ ವಚನ ಗಾಯನ ಸ್ಪರ್ಧೆ ಮೆಚ್ಚುಗೆಗೆ ಪಾತ್ರವಾಯಿತು.
ಮಾದಾರ ಚನ್ನಯ್ಯ ಅವರ ಹೊಸ್ತಿಲ ಹುಣ್ಣಿಮೆಯ 954ನೇ ಜಯಂತ್ಯುತ್ಸವದ ಅಂಗವಾಗಿ ವಿಶ್ವಮಾನವ ವಿಚಾರ ವೇದಿಕೆ, ಕನ್ನಡ ಸೇನೆ ಕರ್ನಾಟಕ ಹಾಗೂ ಕಸ್ತೂರಿ ಸಿರಿಗನ್ನಡ ವೇದಿಕೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ಪರ್ಧೆಗೆ 35ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು. ಸ್ಪರ್ಧಿಸುವವರಿಗೆ ವಯಸ್ಸಿನ ಮಿತಿ ಇಲ್ಲದ ಕಾರಣ ಮಂಡ್ಯ ಮಾತ್ರವಲ್ಲದೆ ಚಿತ್ರದುರ್ಗ, ಹುಬ್ಬಳ್ಳಿಯಿಂದಲೂ ಸ್ಪರ್ಧಿಗಳು ಪಾಲ್ಗೊಂಡರು.
ತೀವ್ರ ಪೈಪೋಟಿಯ ನಡುವೆ ಮಂಡ್ಯದ ವಿಶ್ವಾಸ್(ಪ್ರ) ಮತ್ತು ನೇತ್ರಾವತಿ(ದ್ವಿ), ಚಿತ್ರದುರ್ಗದ ಹನುಮಂತಪ್ಪ(ತೃ)ನ ಬಹುಮಾನ ಪಡೆದುಕೊಂಡರು. ಇವರಿಗೆ ಕ್ರಮವಾಗಿ ಐದು, ಮೂರು ಹಾಗೂ ಎರಡು ಸಾವಿರ ರೂ ನಗದಿನ ಜತೆಗೆ ಪ್ರಶಸ್ತಿ ನೀಡಲಾಯಿತು. ಅಂತೆಯೇ ಭಾಗವಹಿಸಿದವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ಸಾಹಿತಿ ಮ.ಸಿ.ನಾರಾಯಣ ರಚಿತ ‘ಮಾನವೀಯತೆಯ ಹರಿಕಾರರು’ ಹಾಗೂ ‘ಅಡ್ಡೆ’ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ಇದಕ್ಕೂ ಮುನ್ನ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಾಧ್ಯಾಪಕ ಮ.ರಾಮಕೃಷ್ಣ, ಪಾದಗಳಿಗೆ ರಕ್ಷೆಗಳನ್ನು ಹೊಲಿದು ಕೊಡುವ ವ್ಯಕ್ತಿಯನ್ನ ಕೀಳಾಗಿ ಕಾಣದೇ ಉತ್ತಮ ನಾಗರಿಕನನ್ನಾಗಿ ನೋಡಬೇಕು ಎಂಬುದನ್ನು ಅಂದಿನ ಕಾಲದಲ್ಲಿಯೇ ಮಾದಾರ ಚನ್ನಯ್ಯ ಅವರ ಹೇಳಿಕೊಟ್ಟು ಹೋಗಿದ್ದಾರೆ. ಅವರ ಹೆಸರು ಹೇಳಿದರೆ ಸಾಕು ಮೂಕವಿಸ್ಮತರಾಗುತ್ತೇವೆ. ಯಾವುದೇ ಒಂದು ಪದ್ಯವನ್ನು ನೋಡಿದರೆ ಅದನ್ನು ಹಲವು ಆಯಾಮಗಳಲ್ಲಿ ಕಾಣುತ್ತೇವೆ. ಮಾಡುವ ಕೆಲಸ ಒಂದೇ ಆಗಿದ್ದರು ಅದನ್ನು ಮೇಲುಕೀಳು ಎಂಬ ಆಯಾಮದಲ್ಲಿ ನೋಡುವ ಮನೋಭಾವ ಬಿಡಬೇಕು ಎಂದು ಸಲಹೆ ನೀಡಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ, ಕನ್ನಡಸೇನೆ ಜಿಲ್ಲಾಧ್ಯಕ್ಷ ಎಚ್.ಸಿ.ಮಂಜುನಾಥ್, ಸಹಾಯಕ ಪ್ರಾಧ್ಯಾಪಕರಾದ ಸುಮಿತ್ರಾ, ಡಾ.ಕೆಂಪಮ್ಮ, ವಾಣಿಜ್ಯ ತೆರಿಗೆ ಇಲಾಖೆಯ ಮುಖ್ಯಆಯುಕ್ತ ಭೀಮಾ ಶಂಕರ್, ಕೆಪಿಎಸ್‌ಸಿ ಮಾಜಿ ಸದಸ್ಯ ದುಗ್ಗಪ್ಪ, ರಾಜ್ಯ ವಚನ ಸಾಹಿತ್ಯ ಪರಿಷತ್ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಮಾದಿಗ ಮಿಸಲಾತಿ ಸಮಿತಿಯ ಜಿಲ್ಲಾಧ್ಯಕ್ಷ ಚಿಕ್ಕಪಾಪಯ್ಯ, ವೇದಿಕೆಯ ಪ್ರಧಾನ ಕಾರ್ಯದರ್ಶಿ ಎನ್.ಎಲ್.ಭರತ್‌ರಾಜ್ ಭಾಗವಹಿಸಿದ್ದರು.