ಜಿಲ್ಲೆ

ವಿವೇಕಾನಂದರ ಶಾಂತಿ ಸಂದೇಶ ಸಾರ್ವಕಾಲಿಕ: ಸ್ವಾಮಿ ವೀರೇಶಾನಂದ ಸರಸ್ವತಿ ಅಭಿಮತ

ಮೈಸೂರು: ಅಮೆರಿಕದ ಷಿಕಾಗೋಗೆ ತೆರಳುವ ಮುನ್ನ ಸ್ವಾಮಿ ವಿವೇಕಾನಂದರು ಮೈಸೂರು ರಾಜರ ಆತಿಥ್ಯ ಸ್ವೀಕರಿಸಿದ್ದರು. ಅದರ ಕುರುಹು ಈಗ ವಿವೇಕ ಸ್ಮಾರಕವಾಗಿ ತಲೆ ಎತ್ತುತ್ತಿದ್ದು, ಮುಂದಿನ ಪೀಳಿಗೆಗೆ ಇತಿಹಾಸ ತಿಳಿಸಲಿದೆ ಎಂದು ತುಮಕೂರಿನ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು ಹಾಗೂ ಅಂಕಣಕಾರರೂ ಆದ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.
ರಾಮಕೃಷ್ಣ-ವಿವೇಕಾನಂದ ಭಾವಪ್ರಚಾರ ಪರಿಷತ್ತಿನ 9ನೇ ವಾರ್ಷಿಕ ಸಮ್ಮೇಳನದ ಅಂಗವಾಗಿ ನಗರದ ಸದ್ವಿದ್ಯಾ ಶಾಲೆಯ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವೀರ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರು ದೇಶಾದ್ಯಂತ ಸಂಚಾರ ಮಾಡಿದ್ದರು. ಐತಿಹಾಸಿಕ ಷಿಕಾಗೋ ಸಮ್ಮೇಳನಕ್ಕೆ ತೆರಳುವ ಮುನ್ನ ಮೈಸೂರಿಗೆ ಆಗಮಿಸಿ ಮೈಸೂರು ರಾಜರ ಆತಿಥ್ಯ ಸ್ವೀಕರಿಸಿದ್ದರು. ಅರಮನೆಯಲ್ಲಿ ಉಳಿಯದೆ ಇಲ್ಲಿನ ನಿರಂಜನ ಮಠದಲ್ಲಿ ತಂಗಿದ್ದರು ಎಂದರು.
ಷಿಕಾಗೋಗೆ ತೆರಳಲು ಸ್ವಾಮಿ ವಿವೇಕಾನಂದರಿಗೆ ಮೈಸೂರು ರಾಜರೂ ಸಹಾಯ ಮಾಡಿದ್ದರು. ಅಲ್ಲಿ ಮಾಡಿದ ಧಾರ್ಮಿಕ ಭಾಷಣದಿಂದ ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತಾಯಿತು. ಇದರಿಂದ ಮೈಸೂರಿನಲ್ಲಿ ಅವರು ತಂಗಿದ್ದ ಸ್ಥಳವೂ ಮಹತ್ವವನ್ನು ಪಡೆದುಕೊಂಡಿದೆ ಎಂದು ಬಣ್ಣಿಸಿದರು.
ಯುವಶಕ್ತಿಯ ಮೇಲೆ ಅಪಾರ ನಂಬಿಕೆ, ವಿಶ್ವಾಸ ಇಟ್ಟಿದ್ದ ವಿವೇಕಾನಂದರು, ಯುವಜನರನ್ನು ಸಂಘಟಿಸುವ ಕೆಲಸ ಮಾಡಿದರು. ಜಾತಿ, ಮತ ಭೇದ ಇಲ್ಲದೆ ಎಲ್ಲರ ಮನೆಗೆ ತೆರಳಿ ಆತಿಥ್ಯ ಸ್ವೀಕರಿಸುತ್ತಿದ್ದರು ಎಂದು ತಿಳಿಸಿದರು.
ವಿಶ್ವಸಂಸ್ಥೆ ಆರಂಭಕ್ಕೂ ಮುನ್ನವೇ ಸ್ವಾಮಿ ವಿವೇಕಾನಂದರು ಶಾಂತಿ ಸಂದೇಶವನ್ನು ಸಾರಿದ್ದರು. ಅವರ ಶಾಂತಿ ಸಂದೇಶವನ್ನು ಪಾಲಿಸಿದ್ದರೆ ಎರಡು ವಿಶ್ವ ಮಹಾಯುದ್ಧ ಸೇರಿದಂತೆ ಯಾವುದೇ ಯುದ್ಧಗಳು ನಡೆಯುತ್ತಿರಲಿಲ್ಲ. ಶಾಂತಿ, ನೆಮ್ಮದಿ ಜತೆಗೆ ಧಾರ್ಮಿಕತೆ ಉಳಿಯಬೇಕಾದರೆ ಸರ್ವಕಾಲಕ್ಕೂ ವಿವೇಕಾನಂದರ ಶಾಂತಿ ಸಂದೇಶವನ್ನು ಅಗತ್ಯವಾಗಿ ಪಾಲಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.
ಮೈಸೂರಿನಲ್ಲಿ ಷಿಕಾಗೋ ಸಮ್ಮೇಳನವನ್ನು ಮೀರಿಸುವಂತೆ ಧಾರ್ಮಿಕ ಸಮ್ಮೇಳನ ನಡೆಸುವ ಮೂಲಕ ಅವರಿಗೆ ಕೃತಜ್ಞತೆ ಸಲ್ಲಿಸಬೇಕಿದೆ. ಈ ಮೂಲಕ ಮೈಸೂರು ಇನ್ನಷ್ಟು ಎತ್ತರಕ್ಕೆ ಏರಬೇಕಿದೆ ಎನ್ನುವ ಆಶಯ ವ್ಯಕ್ತಪಡಿಸಿದರು.
ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಯಾವುದೇ ಕೆಲಸ ಕಾರ್ಯಗಳು ನಡೆಯಬೇಕಾದರೂ ದೈವ ಪ್ರೇರಣೆ ಬೇಕು. ಹಾಗಾಗಿ, ವಿವೇಕಾನಂದರ ಸ್ಮಾರಕ ಅವರು ಉಳಿದುಕೊಂಡು, ಪಂಡಿತರಿಗೆ ಉಪನ್ಯಾಸ ನೀಡಿದ್ದ ಸದ್ವಿದ್ಯಾ ಪಾಠಶಾಲೆಯ ಬಳಿಯೇ ಆಗುತ್ತಿದೆ ಎಂದರು.
ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಮಾತನಾಡಿ, ಸ್ವಾಮಿ ವಿವೇಕಾನಂದರು ಉಳಿದುಕೊಂಡಿದ್ದ ನಿರಂಜನ ಮಠವನ್ನು ವಿವೇಕ ಸ್ಮಾರಕವಾಗಿ ರೂಪಿಸುವ ಮೂಲಕ ಅವರ ಜೀವನ, ಮಹತ್ವದ ಘಟ್ಟಗಳನ್ನು ಯುವ ಜನತೆಗೆ ತಿಳಿಸುವ ಕೆಲಸ ಆಗಲಿದೆ. ಅಲ್ಲದೆ, ಈ ಮೂಲಕ ಮೈಸೂರಿನ ಹೆಸರು ಎಲ್ಲೆಡೆ ಪಸರಿಸಲಿದೆ ಎಂದು ತಿಳಿಸಿದರು.
ಆದಿಚುಂಚನಗಿರಿ ಮೈಸೂರು ಶಾಖಾ ಮಠದ ಶ್ರೀ ಸೋಮೇಶ್ವರನಾಥ ಸ್ವಾಮೀಜಿ, ವಿಧಾನ ಪರಿಷತ್ತಿನ ಮಾಜಿ ಸದಸ್ಯ ಡಿ.ಮಾದೇಗೌಡ, ನಗರಪಾಲಿಕೆ ಮಾಜಿ ಸದಸ್ಯ ಡಿ.ನಾಗಭೂಷಣ್, ವಕೀಲ ಅರುಣ್‌ಕುಮಾರ್ ಮಾತನಾಡಿದರು.
ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ), ನಗರಪಾಲಿಕೆ ಮಾಜಿ ಸದಸ್ಯೆ ಪ್ರಮೀಳಾ ಭರತ್, ಸದ್ವಿದ್ಯಾ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ನರಹರಿಬಾಬು, ಶ್ರೀ ರಾಮಕೃಷ್ಣ ಸೇವಾ ಸಂಘದ ಅಧ್ಯಕ್ಷ ಎಂ.ಪಾಪೇಗೌಡ, ಹರಿಹರದ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ಶಾರದೇಶಾನಂದಜಿ ಇತರರು ಇದ್ದರು.