ಜಿಲ್ಲೆ

ಕ್ಷಾತ್ರ ಗುಣವನ್ನೂ ಹೊಂದಿದ್ದ ವಿವೇಕಾನಂದ

vijayavani

ಬೆಂಗಳೂರು: ಸ್ವಾಮಿ ವಿವೇಕಾನಂದರ ಸನ್ಯಾಸ, ಧಾರ್ವಿುಕ, ಆಧ್ಯಾತ್ಮಿಕ ಗುಣಗಳನ್ನು ಅಧ್ಯಯನ ಮಾಡಿರುವ ನಮಗೆ ‘ರುಧಿರಾಭಿಷೇಕ’ ಕೃತಿಯಿಂದ ಅವರ ಕ್ಷತ್ರಿಯ ಗುಣಗಳ ಬಗ್ಗೆಯೂ ಪರಿಚಯವಾಗುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಪಾವಗಡ ಪ್ರಕಾಶ್​ರಾವ್ ಹೇಳಿದ್ದಾರೆ.

ಹುಬ್ಬಳ್ಳಿಯ ಸಾಹಿತ್ಯ ಪ್ರಕಾಶನ ಬಸವನಗುಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಬಾಬು ಕೃಷ್ಣಮೂರ್ತಿ ವಿರಚಿತ ‘ರುಧಿರಾಭಿಷೇಕ’, ‘ಯುಗದ್ರಷ್ಟ ಭಗತ್ ಸಿಂಗ್’, ‘1857ರ ಭಾರತ ಸ್ವತಂತ್ರ್ಯ ಸಂಗ್ರಾಮ’, ‘ಸ್ವಾತಂತ್ರ್ಯ ಹೋರಾಟದ ಹೀರೋಗಳು’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು. ‘ರುಧಿರಾಭಿಷೇಕ’ ಕೃತಿಯಲ್ಲಿ ಎಲ್ಲಿಯೂ ಅಧ್ಯಯನ ಮಾಡಲು ಸಿಗದ ಸ್ವಾಮಿ ವಿವೇಕಾನಂದರ ಕ್ಷಾತ್ರ ಗುಣಗಳ ಬಗ್ಗೆಯೂ ವಿವರಿಸಲಾಗಿದೆ ಎಂದರು.

ದೇಶದಲ್ಲಿ ಸನ್ಯಾಸಿಗಳಾದ ಅನೇಕರು ವೀರ ಕ್ಷತ್ರಿಯರೂ ಆಗಿ ಯುದ್ಧ ಸಂದರ್ಭದಲ್ಲಿ ಹೋರಾಡಿದ ಬಗ್ಗೆ ಸಾಕಷ್ಟು ಪುರಾವೆಗಳಿವೆ. ಅಂತೆಯೇ ಸನ್ಯಾಸಿಯಾಗಿದ್ದ ಸ್ವಾಮಿ ವಿವೇಕಾನಂದರೂ ಶೌರ್ಯ ಗುಣಗಳನ್ನು ಹೊಂದಿದ್ದರು ಎಂಬುದು ಅತಿಶಯೋಕ್ತಿಯಲ್ಲ ಎಂದು ಹೇಳಿದರು.

ದೇಶದ ಯುವಜನರು ಇತಿಹಾಸ ಹಾಗೂ ಭಾರತದ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಬಾಬು ಕೃಷ್ಣಮೂರ್ತಿ ಅವರ ಕೃತಿಗಳನ್ನು ಅಭ್ಯಾಸ ಮಾಡಬೇಕು. ಆ ಮೂಲಕ ದೇಶಕ್ಕಾಗಿ ಪ್ರಾಣಾರ್ಪಣೆ ಮಾಡಿದ ಅನೇಕ ಮಹನೀಯರ ಬಗ್ಗೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಸುಪ್ರೀಂಕೋರ್ಟ್​ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ, ಡಾ. ಎಸ್.ಆರ್. ರಾಮಸ್ವಾಮಿ, ಸಾಹಿತ್ಯ ಪ್ರಕಾಶನದ ಮುಖ್ಯಸ್ಥ ಎಂ.ಎ. ಸುಬ್ರಹ್ಮಣ್ಯ ಮತ್ತಿತರರಿದ್ದರು.

ಹೋರಾಟಗಾರರ ಬಗ್ಗೆ ಅಧ್ಯಯನ ಮಾಡಿ

ಸರ್ಜಿಕಲ್ ಸ್ಟ್ರೈಕ್ ಮಾದರಿಯನ್ನು ಇಸ್ರೇಲ್​ನಲ್ಲಿ ಯಹೂದಿಗಳು ಹಲವು ವರ್ಷಗಳ ಹಿಂದೆಯೇ ನಡೆಸಿದ್ದಾರೆ. ಅಂತಹ ಶೌರ್ಯ ಮತ್ತು ಪ್ರಾಣಾರ್ಪಣೆ ಗುಣಗಳು ಯುವಕರಲ್ಲಿ ಬೆಳೆಯಬೇಕು. ಯುವಜನರು ದೇಶಾಭಿಮಾನ, ಸ್ವಾತಂತ್ರ್ಯ ಹೋರಾಟಗಾರರ ಕುರಿತ ಪುಸ್ತಕಗಳ ಅಧ್ಯಯನ ಮಾಡಬೇಕು. ದೇಶಾಭಿಮಾನ ಉಳ್ಳವರು ಮಾತ್ರ ವೀರಾವೇಶದಿಂದ ಹೋರಾಡುವ ಮನಸ್ಥಿತಿ ಹೊಂದಿರುತ್ತಾರೆ ಎಂದು ನಿವೃತ್ತ ಐಪಿಎಸ್ ಅಧಿಕಾರಿ ಡಾ. ಡಿ.ವಿ. ಗುರುಪ್ರಸಾದ್ ಹೇಳಿದರು.