ಜಿಲ್ಲೆ

ಶಿಕ್ಷಣದಿಂದ ಬಹುಮುಖ ವ್ಯಕ್ತಿತ್ವ ವಿಕಸನ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಬೈಂದೂರು

ಶಿಕ್ಷಣದ ಉದ್ದೇಶ ಬಹುಮುಖ ವ್ಯಕ್ತಿತ್ವ ವಿಕಸನ. ಉತ್ತಮ ಶಿಕ್ಷಣ ದೊರೆತಾಗ ಮಾತ್ರ ದೇಶ, ಸಮಾಜಕ್ಕೆ ಆಸ್ತಿಯಾಗಬಲ್ಲ. ವಿದ್ಯೆ ಇಲ್ಲದವರು ಸಮಾಜಕ್ಕೆ ಹೊರೆಯಾಗುತ್ತಾರೆ ಎಂದು ಯುಬಿಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಯು.ಬಿ.ಶೆಟ್ಟಿ ಹೇಳಿದರು.

ಉಪ್ಪುಂದ ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ ವಾರ್ಷಿಕೋತ್ಸವ ಸೃಜನ-3 ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪ್ಪುಂದ ಹುಟ್ಟೂರಾದ ಕಾರಣ ಊರಿನಲ್ಲಿ ಒಂದು ಶಾಶ್ವತ ಕೊಡುಗೆ ನೀಡಬೇಕು ಹಾಗೂ ಪ್ರತಿಯೊಂದು ಮಗುವೂ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಎರಡು ಶಿಕ್ಷಣ ಸಂಸ್ಥೆಯನ್ನು ಸುಪರ್ದಿಗೆ ಪಡೆದು ಗುಣಮಟ್ಟದ ಶಿಕ್ಷಣ ನೀಡಲಾಗುತ್ತಿದೆ. ಮುಂದೊಂದು ದಿನ ಈ ವಿದ್ಯಾರ್ಥಿಗಳು ಸಮಾಜಕ್ಕೆ ದೊಡ್ಡ ಶಕ್ತಿಯಾಗಿ ರೂಪುಗೊಳ್ಳಲು ಸಹಕಾರಿಯಾಗುತ್ತದೆ ಎಂದರು.

ಯುಬಿಎಸ್ ಚಾರಿಟೆಬಲ್ ಟ್ರಸ್ಟ್ ಟ್ರಸ್ಟಿ ರಂಜನಾ ಯು.ಬಿ.ಶೆಟ್ಟಿ ಉದ್ಘಾಟಿಸಿದರು. ಕೊಲ್ಲೂರು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ಬಾಬು ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಮುಖ್ಯ ಶಿಕ್ಷಕಿ ಶೋಭಾ ಎಸ್.ಡಿ ಆಲ್ಮೇಡಾ ಶಾಲಾ ವಾರ್ಷಿಕ ವರದಿ ಮಂಡಿಸಿದರು. ವಿದ್ಯಾರ್ಥಿ ನಾಯಕಿ ಅದಿತಿ ಸ್ವಾಗತಿಸಿದರು. ವಿದ್ಯಾರ್ಥಿ ನಾಯಕ ಶ್ರೀತೇಶ್ ವಂದಿಸಿದರು. ಶೌರ್ಯ ನಿರೂಪಿಸಿದರು.

ಬಹುಮಾನ ವಿತರಣೆ

ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಈ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ನಾಗೇಶ ನಾಯ್ಕ ನಗದು ಸಹಿತ ಗೌರವಿಸಿದರು.

ನಮ್ಮ ಎರಡೂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಮುಂದಿನ ಶೈಕ್ಷಣಿಕ ವರ್ಷದಿಂದ ಮಧ್ಯಾಹ್ನದ ಬಿಸಿಯೂಟ ಉಚಿತ ನೀಡಲು ನಿರ್ಧರಿಸಲಾಗಿದೆ. ಇದುವರೆಗೆ ಮಕ್ಕಳಿಂದ ಶುಲ್ಕ ಪಡೆಯಲಾಗುತ್ತಿತ್ತು. ಈ ಬೆಳವಣಿಗೆ ಬೈಂದೂರು ಭಾಗದ ಆಂಗ್ಲ ಮಾಧ್ಯಮ ಶಾಲೆಗಳ ಮಕ್ಕಳಲ್ಲಿ ಮತ್ತು ಶೈಕ್ಷಣಿಕ ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲು. ಆತ್ಮಸಂತೋಷಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. -ಯು.ಬಿ.ಶೆಟ್ಟಿ,ಯುಬಿಎಸ್ ಚಾರಿಟೆಬಲ್ ಟ್ರಸ್ಟ್ ಚೇರ್ಮನ್ https://www.vijayavani.net/youth-dies-during-highway-construction https://www.vijayavani.net/kaup-brahmakalash-preparatory-meeting