ಮೈಸೂರು; ಸೇವೆಯನ್ನು ಪ್ರಧಾನ ಧರ್ಮ ಎಂದು ಭಾವಿಸಿದ್ದ ವಿವೇಕಾನಂದರು ದೀನ ದಲಿತರ ಉದ್ಧಾರಕ್ಕೆ ಶ್ರಮಿಸಿದ್ದರು ಎಂದು ನಿವೃತ್ತ ಪ್ರಾಧ್ಯಾಪಕ ಜಿ.ಬಿ.ಶಿವರಾಜು ಹೇಳಿದರು.
ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ನಗರದ ಶಾರದಾ ವಿಲಾಸ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ರಾಷ್ಟ್ರೀಯ ಯುವ ದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಶಕ್ತಿಯ ಮಹತ್ವ ತಿಳಿದಿದ್ದ ಸ್ವಾಮಿ ವಿವೇಕಾನಂದರು ಸಮಾಜದ ಅಭಿವೃದ್ಧಿ ಕುರಿತು ದೂರದರ್ಶಿತ್ವ ಹೊಂದಿದ್ದರು ಎಂದರು.
ರಾಜಕೀಯ ಸ್ವಾತಂತ್ರ್ಯ ಬರುವುದು ದೊಡ್ಡ ಮಾತಲ್ಲ, ಅದನ್ನು ಉಳಿಸಿಕೊಳ್ಳುವ ಯೋಗ್ಯತೆ, ಶಕ್ತಿ ನಮ್ಮವರಲ್ಲಿ ಇದೆಯೇ ಎಂದು ಸ್ವಾಮಿ ವಿವೇಕಾನಂದರು, ಸ್ವಾತಂತ್ರೃ ಹೋರಾಟಗಾರ ಬಾಲಗಂಗಾಧರ್ ತಿಲಕ್ ಅವರನ್ನು ಪ್ರಶ್ನಿಸಿದ್ದರು.
ಚಾರಿತ್ರ್ಯ ಹಾಗೂ ನೈತಿಕ ಶಕ್ತಿ ಗಟ್ಟಿಯಾಗಿಲ್ಲದ ರಾಜಕೀಯ ಸ್ವಾತಂತ್ರ್ಯ ಅಪಾಯಕಾರಿ ಎಂದಿದ್ದರು. ಹಾಗಾಗಿಯೇ ಅವರು ಧರ್ಮದ ಜತೆ ವೈಚಾರಿಕತೆ ಮಿಳಿತವಾಗಬೇಕು ಎಂದು ನಂಬಿದ್ದರು. ಇದರ ಫಲವಾಗಿ ಅಂದಿನ ಉದ್ಯಮಿ ಜೆ.ಆರ್.ಟಾಟಾ ಅವರನ್ನು ಪ್ರಚೋದಿಸಿ ಬೆಂಗಳೂರಿನಲ್ಲಿ ಭಾರತೀಯ ವಿಜ್ಞಾನ ಮಂದಿರ ಸ್ಥಾಪಿಸಲು ಕಾರಣರಾದರು ಎಂದು ಹೇಳಿದರು.
ವಾಣಿಜ್ಯ ಮತ್ತು ವ್ಯವಹಾರ ನಿರ್ವಹಣಾ ವಿಭಾಗದ ಡೀನ್ ಪ್ರೊ.ಸತ್ಯನಾರಾಯಣ ಮಾತನಾಡಿ, ವಿವೇಕಾನಂದರು ಬದುಕಿದ್ದು ಅಲ್ಪ ಕಾಲವಾದರೂ ಅವರ ಸಾಧನೆ ಸಾವಿರಾರು ವರ್ಷಗಳ ಕಾಲ ಉಳಿಯಲಿದೆ. ಅವರಷ್ಟು ಬುದ್ಧಿವಂತ ಹಾಗೂ ಹೃದಯವಂತಿಕೆ ಉಳ್ಳ ಸನ್ಯಾಸಿಗಳು ಇನ್ನೊಬ್ಬರಿಲ್ಲ ಎಂದರು.
ಪ್ರಾಂಶುಪಾಲೆ ಡಾ.ಎಂ.ದೇವಿಕಾ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಎ.ಎನ್.ಜ್ಯೋತಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಬಿ.ಎಸ್.ಮಹೇಂದ್ರ ಇತರರು ಇದ್ದರು.