ಜಿಲ್ಲೆ

ವಿವೇಕ ಬಳಗದಿಂದ ಸದ್ಗತಿ ದಿನಾಚರಣೆ

Dharwada - Basavaraj Idli

ಹುಬ್ಬಳ್ಳಿ: ವಿದ್ಯಾರ್ಥಿಗಳು ದೈನಂದಿನ ಜೀವನದ ಕಷ್ಟಗಳನ್ನು ಪರಿಹರಿಸಿಕೊಳ್ಳಲು ಪ್ರತಿದಿನ ಜಪ, ತಪ, ಧ್ಯಾನ, ಯೋಗ, ಪ್ರಾಣಾಯಾಮ ಮುಂತಾದವುಗಳನ್ನು ರೂಢಿಸಿಕೊಳ್ಳಬೇಕೆಂದು ವಿವೇಕ ಜಾಗೃತ ಬಳಗದ ಎಲ್-2 ಅಧಿಕಾರಿ ಡಾ. ಪಂಕಜಾ ಬ್ಯಾಕೋಡಿ ಹೇಳಿದರು.

ಇಲ್ಲಿಯ ಆನಂದನಗರ ರಸ್ತೆಯ ಮೇದಾರ ಪ್ಲಾಟನಲ್ಲಿರುವ ಸರ್ಕಾರಿ ಅಂಧ ಮಕ್ಕಳ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 122ನೇ ಪುಣ್ಯಸ್ಮರಣೆಯ ಅಂಗವಾಗಿ ಆಯೋಜಿಸಿದ್ದ ಸದ್ಗತಿ ದಿನಾಚರಣೆಯಲ್ಲಿ ಅತಿಥಿಗಳಾಗಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ದೈವಬಲ ಮತ್ತು ಮನೋಬಲವನ್ನು ಬೆಳೆಸಿಕೊಳ್ಳಬೇಕು. ಅದರಿಂದ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ ಎಂದರು.

ಸೇವಾಶ್ರೀ ಡಾ. ಬಿ.ಎಸ್. ಮಾಳವಾಡ ಮಾತನಾಡಿ, ವಿದ್ಯಾರ್ಥಿಗಳು ಸ್ವಾಮಿ ವಿವೇಕಾನಂದರ ಶಿಸ್ತು, ಸರಳತೆ, ಶ್ರದ್ಧೆ, ಮನೋನಿರ್ಧಾರ, ಧಾರ್ಮಿಕತೆ, ಸಂಹವನ ಕೌಶಲ ಮುಂತಾದ ಮಾನವೀಯ ಗುಣಗಳನ್ನು ಅಳವಡಿಸಿಕೊಳ್ಳಬೇಕೆಂದರು.

ಬಳಗದ ಅಧ್ಯಕ್ಷ ಕಲ್ಲಪ್ಪ ಮರದಣ್ಣವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ವಿಜಯಾ ಪರಡ್ಡಿ, ಉಡುಪಿ ಜಿಲ್ಲೆಯ ಡಿವೈನ್ ಪಾರ್ಕ್ ಕಳೆದ 38 ವರ್ಷಗಳಿಂದ ಮತ್ತು ಹುಬ್ಬಳ್ಳಿಯ ವಿವೇಕ ಜಾಗೃತ ಬಳಗಗಳು ಕಳೆದ 25 ವರ್ಷಗಳಿಂದ ಸೇವಾ ಕಾರ್ಯ ಮಾಡುತ್ತಿರುವದರ ಬಗ್ಗೆ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಧೀಕ್ಷಕ ಆರ್.ಎಂ. ಸಾಬೋಜಿ ಮಾತನಾಡಿದರು.

30 ಅಂಧ ವಿದ್ಯಾರ್ಥಿಗಳಿಗೆ ಶ್ರೀರಾಮ ರಾ ಸ್ತೋತ್ರದ ಗ್ರಂಥಗಳನ್ನು ಉಚಿತವಾಗಿ ವಿತರಿಸಲಾಯಿತು.

ಮಕ್ಕಳು ಭಾವಗೀತೆ ಮತ್ತು ಭಕ್ತಿ ಗೀತೆಗಳನ್ನು ಪ್ರಸ್ತುತ ಪಡಿಸಿದರು.
ಮುಖ್ಯಾಧ್ಯಾಪಕ ಅಣ್ಣಪ್ಪ ಕೋಳಿ ಸ್ವಾಗತಿಸಿದರು. ಸುಚೇತನಾ ಬೇವಿನಕಟ್ಟಿ ಕಾರ್ಯಕ್ರಮ ನಿರೂಪಿಸಿದರು. ಆಶಾ ಜಾಧವ ವಂದಿಸಿದರು.