ಮಮದಾಪುರ: ಸಮೀಪದ ಬೆಣಚಿನಮರಡಿ (ಕೊ) ಗ್ರಾಮದಲ್ಲಿ ಶ್ರೀ ವಿಠ್ಠಲ&ರುಕ್ಮಿಣಿ ದೇಗುಲದ 25ನೇ ವರ್ಷದ ರಜತಮಹೋತ್ಸವ ಅಂಗವಾಗಿ ಶನಿವಾರ ಸಂಭ್ರಮದ ರಥೋತ್ಸವ ಜರುಗಿತು.
ಬೆಳಗ್ಗೆ ಶ್ರೀ ವಿಠ್ಠಲ&ರುಕ್ಮಿಣಿ ದೇವರಿಗೆ ಮಹಾಭಿಷೇಕ ಹಾಗೂ ವಿಶೇಷ ಪೂಜೆ ನೆರವೇರಿತು. ಬಳಿಕ ಜಾತ್ರಾ ಮಹೋತ್ಸವ ಅಂಗವಾಗಿ ಎಂಟು ದಿನ ಹಮ್ಮಿಕೊಂಡಿದ್ದ 108 ಗ್ರಂಥಗಳ ಅನುಷ್ಠಾನ, ಗ್ರಂಥ ಜ್ಞಾನೇಶ್ವರಿ ಪಾರಾಯಣ ಹಾಗೂ ಅಖಂಡ ಹರಿನಾಮ ಸಪ್ತಾಹ ಪ್ರವಚನ ಮಂಗಳಗೊಂಡಿತು.
ಪಂಢರಪುರದ ದೇವವ್ರತ (ರಾಣು ಮಾಲಿಕ) ವಾಸ್ಕರ್ ಮಹಾರಾಜರು, ಮುಖಂಡರಾದ ಟಿ.ಆರ್.ಕಾಗಲ್, ಸುರೇಶ ಸನದಿ ಹಾಗೂ ವಿವಿಧ ಗ್ರಾಮಗಳ ದಿಂಡಿ ಸಂತರನ್ನು ದೇವಸ್ಥಾನದ ಟ್ರಸ್ಟ್ ಕಮಿಟಿ ವತಿಯಿಂದ ಸನ್ಮಾನಿಸಲಾಯಿತು.
ಪುಂಡಲೀಕ ಮನ್ನಾಪುರ ಮಹಾರಾಜರು ಉಪಸ್ಥಿತರಿದ್ದರು. ದೇವರ ಪಲ್ಲಕ್ಕಿ, ಕರಡಿ ಮಜಲು ಹಾಗೂ ದಿಂಡಿ ಸಂತರ ಹರಿನಾಮ ಸ್ಮರಣೆಯೊಂದಿಗೆ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಬಾಳೆಹಣ್ಣು, ಉತ್ತತ್ತಿ ಅರ್ಪಿಸಿ ಭಕ್ತಿ ಸಮರ್ಪಿಸಿದರು.