ವಶಪಡಿಸಿಕೊಂಡ ಯೂರಿಯಾ ರಸಗೊಬ್ಬರದ ಜತೆಗೆ ಪೊಲೀಸ್ ನಿರೀಕ್ಷಕ ಪ್ರಕಾಶ್ ದೇವಾಡಿಗ, ಕೃಷಿ ಅಧಿಕಾರಿ ನಂದನ ಶೆಣೈ ಪಿ. ಇದ್ದಾರೆ. 
ಜಿಲ್ಲೆ

ಆರು ಪಟ್ಟು ಅಧಿಕ ದರಕ್ಕೆ ಯೂರಿಯಾ ಮಾರಾಟ VITTAL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲು
  • ಅಂತಾರಾಜ್ಯ ದಂಧೆ ಶಂಕೆ
ವಿಟ್ಲ: ಕರ್ನಾಟಕ ಗಡಿಭಾಗವಾದ ಕೊಳ್ನಾಡು ಖಂಡಿಗದ ಮನೆಗಂಗಳದಲ್ಲಿ ಪತ್ತೆಯಾದ ರಸಗೊಬ್ಬರವನ್ನು ಆರು ಪಟ್ಟು ಅಧಿಕ ದರಕ್ಕೆ ಮಾರಾಟ ಮಾಡುವ ದಂಧೆಯ ವಿಚಾರದಲ್ಲಿ ವಿಟ್ಲ ಪೊಲೀಸರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಮಹಜರು ಪ್ರಕ್ರಿಯೆಗಳು ನಡೆದು, ಮನೆ ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಕೊಳ್ನಾಡು ಬೋಳಂತೂರು ಖಂಡಿಗ ನಿವಾಸಿ ಮೊಹಮ್ಮದ್ ಅಶ್ರಫ್ ಎಂಬಾತನ ವಿರುದ್ಧ ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಕೃಷಿ ಅಽಕಾರಿ ನಂದನ ಶೆಣೈ ಪಿ. ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಘಟನೆ ಬೆಳಕಿಗೆ ಬರುತ್ತಿದ್ದಂತೆ ಅಶ್ರಫ್ ತಲೆ ಮರೆಸಿಕೊಂಡಿದ್ದು, ಶೋಧ ಕಾರ್ಯ ನಡೆಯುತ್ತಿದೆ. ದಂಧೆಯಲ್ಲಿ ಬೆಂಗಳೂರು ಮೂಲದ ಸತೀಶ್ ಎಂಬಾತ ಭಾಗಿಯಾದ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ತನಿಖೆ ನಡೆಯುತ್ತಿದೆ.
ಕೃಷಿ ಗ್ರೇಡ್‌ನ ಯೂರಿಯಾ ರಸಗೊಬ್ಬರವನ್ನು ಕೈಗಾರಿಕೆ ಬಳಕೆಗೆ ತಾಂತ್ರಿಕ ಗ್ರೇಡ್‌ನ ಚೀಲಗಳಿಗೆ ತುಂಬಿಸಿ ಮಾರಾಟ ಮಾಡುತ್ತಿರುವುದು ಕಂಡುಬಂದಿದ್ದು, ಅಂದಾಜು ಒಟ್ಟು ೬೩೨ ಚೀಲಗಳು ದಾಳಿ ವೇಳೆ ಪತ್ತೆಯಾಗಿವೆ. ಸರ್ಕಾರದ ಹೆಸರಿರುವ ಹಳದಿ ಗೋಣಿಯಿಂದ ಕಂಪನಿ ಹೆಸರಿರುವ ಬಿಳಿ ಗೋಣಿಗೆ ತುಂಬಿ ಮರದ ಕಂಪನಿಗಳಿಗೆ ಕಳುಹಿಸಲಾಗುತ್ತಿತ್ತು ಎಂಬುದು ತನಿಖೆಯಿಂದ ಬಹಿರಂಗಗೊಂಡಿದೆ.

ರೈತ ಹೆಸರಿನಲ್ಲಿ ದಂಧೆ:

ಈ ರಸಗೊಬ್ಬರ ಬೆಂಗಳೂರು, ಮಂಡ್ಯ, ತುಮಕೂರು, ಹಾಸನ ಭಾಗದಲ್ಲಿ ಕೃಷಿಕರಿಗೆ ವಿತರಣೆಯಾಗುತ್ತಿತ್ತು ಎಂದು ಹೇಳಲಾಗಿದೆ. ರೈತರಿಗೆ ಗರಿಷ್ಠ ೫ ಚೀಲ ನೀಡುವ ಗೊಬ್ಬರ ಅಗಾಧ ಪ್ರಮಾಣದಲ್ಲಿ ಪತ್ತೆಯಾಗಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ. ರೈತರಿಗೆ ಚೀಲಕ್ಕೆ ೨೬೦ ರೂ. ಇರುವ ಚೀಲ ಬಣ್ಣ ಬದಲಾಗುತ್ತಿದ್ದಂತೆ ೧೬೦೦ ರೂ. ದರಕ್ಕೆ ಪರಿವರ್ತಿಸಿ ಕಾರ್ಖಾನೆಗಳಿಗೆ ಪೂರೈಕೆಯಾಗುತ್ತಿತ್ತು.

ಪ್ರಭಾವಿಗಳ ಕೈವಾಡ

ಭಾರಿ ಪ್ರಮಾಣದಲ್ಲಿ ಯೂರಿಯಾವನ್ನು ಕೇರಳಕ್ಕೆ ಸಾಗಾಟ ಮಾಡುತ್ತಿರುವ ಜಾಲದಲ್ಲಿ ಪ್ರಭಾವಿಗಳ ಕೈವಾಡ ಇರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ರೈತರ ಹೆಸರಿನಲ್ಲಿ ರಸಗೊಬ್ಬರ ಚೀಲಗಳು ಮಾರಾಟವಾಗಿತ್ತಾ? ಅಥವಾ ಸಹಕಾರಿ ಸಂಘಗಳಿಂದಲೇ ನೇರವಾಗಿ ಸರಬರಾಜು ಆಗಿತ್ತಾ ಎಂಬ ಬಗ್ಗೆಯೂ ತನಿಖೆ ನಡೆಯಬೇಕಾಗಿದೆ.