ಯೂರಿಯ ರಸಗೊಬ್ಬರ ಚೀಲ  
ಜಿಲ್ಲೆ

ಯೂರಿಯ ರಕ್ಷಣೆ ಪೊಲೀಸರಿಗೆ ತಲೆನೋವು VITTAL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾಡಳಿತದಿಂದ ತುರ್ತು ಕ್ರಮವಿಲ್ಲ
ವಿಟ್ಲ: ಕೊಳ್ನಾಡು ಖಂಡಿಗದ ಮನೆಗಂಗಳದಲ್ಲಿ ಕೃಷಿಕರಿಗೆ ಸೇರಬೇಕಾದ ಯೂರಿಯ ರಸಗೊಬ್ಬರವನ್ನು ಆರು ಪಟ್ಟು ಅಧಿಕ ಮೊತ್ತಕ್ಕೆ ಮಾರಾಟ ಮಾಡುವ ದಂಧೆ ಭೇದಿಸಿದ ಪೊಲೀಸ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದ ೬೩೨ ಚೀಲ ಗೊಬ್ಬರ ವಿಲೇವಾರಿಗೆ ಜಿಲ್ಲಾಡಳಿತ ತುರ್ತು ಕ್ರಮ ಕೈಗೊಳ್ಳದೆ ಹಾಳಾಗಿ ಹೋಗುವ ಆತಂಕ ಎದುರಾಗಿದೆ.
ಕೊಳ್ನಾಡು ಬೋಳಂತೂರು ಖಂಡಿಗ ನಿವಾಸಿ ಮೊಹಮ್ಮದ್ ಅಶ್ರಫ್ ಹಾಗೂ ಬೆಂಗಳೂರು ಮೂಲದ ಸತೀಶ್ ಮೇಲೆ ಪ್ರಕರಣ ದಾಖಲಾಗಿದ್ದು, ಇಬ್ಬರೂ ತಲೆಮರೆಸಿಕೊಂಡಿದ್ದಾರೆ. ಗುರುವಾರ ಭಾರಿ ಪ್ರಮಾಣದಲ್ಲಿ ಕೃಷಿಕರಿಗೆ ಸರ್ಕಾರದ ಸಹಾಯ ಧನದಲ್ಲಿ ವಿತರಣೆಯಾಗಬೇಕಾಗಿದ್ದ ಯೂರಿಯವನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಇದರ ಮಾದರಿಯನ್ನು ಸಂಗ್ರಹಿಸಿ ಉಳಿದ ಚೀಲಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲು ಜಿಲ್ಲಾಡಳಿತದ ಮೊರೆ ಹೋಗಿದ್ದಾರೆ.
ಸ್ಥಳೀಯವಾಗಿ ಎಲ್ಲಿಗೆ ವಿತರಣೆ ಮಾಡಬೇಕೆಂಬ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಅಗತ್ಯವಿದೆ. ಎರಡನೇ ಶನಿವಾರ ಹಾಗೂ ಭಾನುವಾರ ನೆಪ ಹೇಳಿ ತ್ವರಿತವಾಗಿ ಆದೇಶ ಮಾಡದೆ, ಗೊಬ್ಬರ ರಕ್ಷಣೆ ಮಾಡುವುದು ಪೊಲೀಸರಿಗೆ ತಲೆನೋವಾಗಿದೆ. ತ್ವರಿತ ಕ್ರಮ ಕೈಗೊಳ್ಳಬೇಕಾದ ಕೃಷಿ ಇಲಾಖೆಯೂ ಇದಕ್ಕೆ ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಮಳೆ ಅಽಕವಾದರೆ ಇದು ಕರಗಿ ಹೋಗುವ ಸಾಧ್ಯತೆ ಇದೆ. ಸಂಬಂಧಪಟ್ಟವರು ಸೂಕ್ತ ಗೋದಾಮು ವ್ಯವಸ್ಥೆಯನ್ನು ಕಲ್ಪಿಸಿಲ್ಲ. ಇದರ ನಿರ್ವಹಣೆ, ಸಾಗಾಟ, ಕೂಲಿ ವೆಚ್ಚ ಎಲ್ಲವೂ ಪೊಲೀಸ್ ಇಲಾಖೆಗೆ ಹೊರೆಯಾಗಿ ಪರಿಣಮಿಸಿದೆ.