ವಿಟ್ಲ ತಾಲೂಕು ಹಾಗೂ ವಿಧಾನ ಸಭಾ ಕ್ಷೇತ್ರ ರಚನೆಗೆ ಆಗ್ರಹಿಸಿ ಉಪ ತಹಸೀಲ್ದಾರ್ ರಶ್ಮಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ.ಬಶೀರ್, ರಮಾನಾಥ ವಿಟ್ಲ, ಮುರುವ ಮಹಾಬಲ ಭಟ್, ಕಾನ ಈಶ್ವರ ಭಟ್ ಇದ್ದರು. 
ಜಿಲ್ಲೆ

ವಿಟ್ಲ ತಾಲೂಕು ನಮ್ಮ ಹಕ್ಕು VITTAL

ನಿಶಾಂತ ಎನ್ ಬಿಲ್ಲಂಪದವು

ಪ್ರಮುಖ ಮುಖ್ಯಾಂಶಗಳು

  • ಹೋರಾಟಗಾರ ಮುರುವ ಮಹಾಬಲ ಭಟ್ ಎಚ್ಚರಿಕೆ
  • ಜನ ಜಾಗೃತಿ ಜಾಥಾ
ಪುತ್ತೂರು: ವಿಟ್ಲ ವ್ಯಾಪ್ತಿಯ ಜನರು ಸರ್ಕಾರಿ ಕೆಲಸ ಕಾರ್ಯಗಳಿಗೆ ದೂರದ ತಾಲೂಕು ಕೇಂದ್ರಕ್ಕೆ ಅಲೆಯುವಂತಾಗಿದೆ. ವಿಟ್ಲ ಹೋಬಳಿಯಲ್ಲಿ ಜನಸಾಂದ್ರತೆ ಹೆಚ್ಚಿದ್ದು, ತಾಲೂಕು ರಚನೆಯಾದಲ್ಲಿ ಅಲೆದಾಟ ತಪ್ಪಲಿದೆ. ವಿಟ್ಲ ತಾಲೂಕು ರಚನೆ ನಮ್ಮ ಹಕ್ಕಾಗಿದೆ ಎಂದು ಹಿರಿಯ ಹೋರಾಟಗಾರ ಮುರುವ ಮಹಾಬಲ ಭಟ್ ಹೇಳಿದರು.
ವಿಟ್ಲ ತಾಲೂಕು ಮತ್ತು ವಿಟ್ಲ ವಿಧಾನಸಭಾ ಕ್ಷೇತ್ರ ಮರುಸ್ಥಾಪನಾ ಹೋರಾಟ ಸಮಿತಿ ವತಿಯಿಂದ ವಿಟ್ಲ ತಾಲೂಕು ಕೇಂದ್ರ ರಚನೆ ಹಾಗೂ ವಿಟ್ಲ ವಿಧಾನಸಭಾ ಕ್ಷೇತ್ರ ಮರು ಸ್ಥಾಪನೆ ಹಕ್ಕೊತ್ತಾಯಕ್ಕಾಗಿ ಮಂಗಳವಾರ ನಡೆದ ಜನ ಜಾಗೃತಿ ಜಾಥಾವನ್ನು ಉದ್ದೇಶಿಸಿ ಮಾತನಾಡಿದರು.
ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ರಮಾನಾಥ ವಿಟ್ಲ ಮಾತನಾಡಿ ಅರುವತ್ತು ವರ್ಷದ ಹಿಂದೆಯೇ ತಾಲೂಕು ರಚನೆ ಆಗಬೇಕೆಂಬ ಕೂಗು ಇತ್ತು. ಹೋರಾಟದ ಧ್ವನಿ ವಿಧಾನಸೌಧಕ್ಕೆ ಕೇಳುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುತ್ತಿದೆ. ಕಡಿಮೆ ಜನ ಸಂಖ್ಯೆಯಿರುವ ಕಡೆಗಳಲ್ಲೂ ತಾಲೂಕು ರಚನೆಯಾಗಿದೆ. ವಿಟ್ಲ ತಾಲೂಕು ರಚನೆಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರು ಚಲೋ ನಡೆಸಲಾಗುವುದು ಎಂದರು.
ವಿಟ್ಲ ಮೇಗಿನಪೇಟೆಯ ಪಶುವೈದ್ಯಕೀಯ ಇಲಾಖೆಯ ಸಮೀಪದಿಂದ ಪೇಟೆಯ ಮೂಲಕ ನಾಡಕಚೇರಿಗೆ ಕಾಲ್ನಡಿಗೆ ಜಾಥಾ ನಡೆಯಿತು. ವಿಟ್ಲ ನಾಡ ಕಚೇರಿಯಲ್ಲಿ ಉಪ ತಹಸೀಲ್ದಾರ್ ರಶ್ಮಿ ಮೂಲಕ ಸರ್ಕಾರಕ್ಕೆ ಬೇಡಿಕೆಯ ಮನವಿಯನ್ನು ಸಲ್ಲಿಸಲಾಯಿತು.
ಹೋರಾಟ ಸಮಿತಿ ಅಧ್ಯಕ್ಷ ಬಿ.ಕೆ.ಬಶೀರ್, ಶ್ರೀಧರ ಶೆಟ್ಟಿ ಬೈಲುಗುತ್ತು, ಜಯರಾಮ ಬಲ್ಲಾಳ್, ಸೇಸಪ್ಪ ಬೆದ್ರಕಾಡು, ರಾಮಣ್ಣ ಪಾಳಿಗೆ, ಮುಗುಳಿ ತಿರುಮಲೇಶ್ವರ ಭಟ್, ಶ್ರೀಧರ ಬಾಳೆಕಲ್ಲು, ವಿಕೆಎಂ ಅಶ್ರ-, ಶ್ರೀನಿವಾಸ ಕೊಲ್ಯ, ರಾಮಣ್ಣ ವಿಟ್ಲ, ಅಬೂಬಕ್ಕರ್ ಅನಿಲಕಟ್ಟೆ, ಸುದರ್ಶನ ಪಡಿಯಾರ್, ರಾಮ, ಹಸೈನಾರ್ ಕಡಂಬು ಮತ್ತಿತರರು ಇದ್ದರು.

ವಿಜಯವಾಣಿ ನಿರಂತರ ವರದಿ

೨೦೧೩ರ ಬಜೆಟ್‌ನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೂತನ ತಾಲೂಕು ಕೇಂದ್ರಗಳ ಘೋಷಣೆ ಮಾಡಲಾಗಿದ್ದು ವಿಟ್ಲ ತಾಲೂಕು ರಚನೆ ಕೈಬಿಡಲಾಗಿತ್ತು. ನಂತರದ ದಿನಗಳಲ್ಲಿ ವಿಜಯವಾಣಿ ನಿರಂತರವಾಗಿ ವರದಿ ಮಾಡಿ ವಿಟ್ಲ ತಾಲೂಕು ರಚನೆ ಹೋರಾಟಗಾರರನ್ನು ಎಚ್ಚರಿಸುವ ಕೆಲಸ ಮಾಡಿದೆ. ‘ವಿಟ್ಲ: ನಾಲ್ಕು ದಶಕದ ಕನಸಿಗೆ ಎಳ್ಳು ನೀರು’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಹೋರಾಟಗಾರರನ್ನು ಎಚ್ಚರಿಸಿತ್ತು. ಬಳಿಕ ತಾಲೂಕು ಹೋರಾಟ ಸಮಿತಿ ಅಸ್ಥಿತ್ವಕ್ಕೆ ಬಂದಿತ್ತು. ೨೦೧೩ ನವೆಂಬರ್ ೨೫ರಂದು ‘ವಿಟ್ಲ ನೂತನ ತಾಲೂಕು ಹೋರಾಟಕ್ಕೆ ಗ್ರಹಣ’ ಎಂಬ ವರದಿ ಪ್ರಕಟಿಸಿತ್ತು. ಮತ್ತೆ ಬಜೆಟ್ ಸಂದರ್ಭದಲ್ಲಿ ತಾಲೂಕು ರಚನೆಯ ಬಗ್ಗೆ ನೆನಪಿಸಿ, ೨೦೧೭ ನವೆಂಬರ್ ನಲ್ಲಿ ಹೋರಾಟ ತೀವ್ರಗೊಳ್ಳುವಂತೆ ಮಾಡಿತ್ತು. ೨೦೧೮ರಲ್ಲಿ ವಿಟ್ಲ ತಾಲೂಕು ಹೋರಾಟಕ್ಕೆ ರೈತ ಸಂಘ ಹಸಿರು ಸೇನೆ ಕೈಜೋಡಿಸಿತು. ಜನವರಿಯಲ್ಲಿಯೂ ಹೋರಾಟ ನಡೆದಾಗ ‘ವಿಟ್ಲ ತಾಲೂಕು ರಚನೆಗೆ ಗರಿಗೆದರಿದ ಹೋರಾಟ’ ಎಂಬ ವಿಸ್ತ್ರತ ವರದಿ ಪ್ರಕಟಿಸಿತ್ತು.

ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿತ್ತು

ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕು ರಚನೆಯ ಬಗ್ಗೆ ಅರ್ಜಿ ಸ್ವೀಕಾರದ ಸಮಯದಲ್ಲಿ ವಿಟ್ಲ ಮೊದಲ ಸ್ಥಾನದಲ್ಲಿತ್ತು. ೨೦೦೮ರಲ್ಲಿ ಜಿಲ್ಲಾಽಗಳ ಕಚೇರಿಯಲ್ಲಿ ನಡೆದ ಸಭೆಯ ಪತ್ರವೊಂದು ಸಾಕ್ಷಿಯಾಗಿದೆ. ವಿಟ್ಲದ ಬಳಿಕ ನರಿಂಗಾಣ, ನೆಲ್ಯಾಡಿ, ಕಡಬ, ಮೂಡುಬಿದಿರೆ, ಮೂಲ್ಕಿ ಹೆಸರಿತ್ತು. ಈಗಾಗಲೇ ಕಡಬ, ಮೂಡುಬಿದಿರೆ, ಮೂಲ್ಕಿ ತಾಲೂಕು ಕೇಂದ್ರವಾಗಿ ಘೋಷಣೆಯಾಗಿದೆ. ಪಟ್ಟಿಯಲ್ಲಿ ಹೆಸರಿಲ್ಲದ ಉಳ್ಳಾಲವೂ ತಾಲೂಕು ಕೇಂದ್ರವಾಗಿದೆ. ರಾಜಕೀಯ ಇಚ್ಛಾಶಕ್ತಿಯ ಕೊರತೆಯಿಂದ ವಿಟ್ಲ ತಾಲೂಕು ಕೇಂದ್ರವಾಗದೆ ಉಳಿದುಕೊಂಡಿದೆ.
"

ತಾಲೂಕು ಹಾಗೂ ವಿಧಾನಸಭಾ ಕ್ಷೇತ್ರಕ್ಕಾಗಿ ರಾಜಕೀಯ ರಹಿತವಾಗಿ ಹೋರಾಟ ನಡೆಯಲಿದೆ. ವಿಟ್ಲ ಹೋಬಳಿಯಲ್ಲಿ ೧ ಲಕ್ಷಕ್ಕೂ ಅಧಿಕ ಜನ ಸಂಖ್ಯೆಯಿದೆ. ೨೯ ಗ್ರಾಮಗಳನ್ನು ಸೇರಿಸಿ ತಾಲೂಕು ಆಗಬೇಕಾಗಿದ್ದು, ಗ್ರಾಮ ಗ್ರಾಮಕ್ಕೆ ಭೇಟಿ ನೀಡಿ ಜಾಗೃತಿ ಮೂಡಿಸಲಾಗುವುದು. ಯಶಸ್ವಿಯಾಗುವ ತನಕ ಪ್ರಯತ್ನ ಬಿಡುವುದಿಲ್ಲ.

— ಕಾನ ಈಶ್ವರ ಭಟ್, ಕಾರ್ಯದರ್ಶಿ