ಕಡೂರು-ಕಾಞಂಗಾಡು ಅಂತರ್‌ರಾಜ್ಯ ಹೆದ್ದಾರಿಯ ವಿಟ್ಲ ಪೇಟೆಯ ಭಾಗದಲ್ಲಿ ರಸ್ತೆ ಅಗಲೀಕರಣಕ್ಕೆ ಕೆಲವು ಅಡೆತಡೆಗಳು ಇದ್ದರೂ, ಮೂರು ತಿಂಗಳಿಂದ ಸತತ ಪ್ರಯತ್ನದ ಮೂಲಕ ಲೊಕೋಪಯೋಗಿ ಇಲಾಖೆ ಕೆಲಸವನ್ನು ಪೂರ್ಣಾಗೊಳಿಸುವಲ್ಲಿ ಯಶಸ್ವಿಯಾಗಿದೆ.
ಅಂತರ್ ರಾಜ್ಯ ಹೆದ್ದಾರಿಯ ಒಕ್ಕೆತ್ತೂರಿನಿಂದ ವಿಟ್ಲ ಪೇಟೆಯಾಗಿ ಕಾಶಿಮಠದವರೆಗೆ ರಸ್ತೆ ಅಭಿವೃದ್ಧಿಗೆ ಸರ್ಕಾರದ ಅಪೆಂಡಿಕ್ಸ್ ಇ ಯೋಜನೆಯಲ್ಲಿ ೫ ಕೋಟಿ ಬಿಡುಗಡೆಯಾಗಿದ್ದು, ಇದರ ಕೆಲಸ ಪ್ರಾರಂಭಿಸುತ್ತಿದ್ದಂತೆ ರಸ್ತೆ ಅಕ್ಕಪಕ್ಕದ ಜಮೀನು ಮಾಲೀಕರು ತಮ್ಮ ವರ್ಗ ಜಾಗ ಎಂದು ರಸ್ತೆಯಲ್ಲೇ ಬೇಲಿ ಅಳವಡಿಸುವ ಕಾರ್ಯ ಮಾಡಿದ್ದರು.
ಪೇಟೆಯ ಭಾಗದಲ್ಲಿ ವರ್ಗ ಜಾಗ ಹೆಚ್ಚಾಗಿದ್ದು, ಕಂದಾಯ ಇಲಾಖೆಯ ಅಽಕಾರಿಗಳ ನಿರ್ಲಕ್ಷ್ಯದಿಂದ ರಸ್ತೆಯ ಜಾಗವನ್ನು ಸರಿಯಾಗಿ ಗುರುತಿಸುವ ಕಾರ್ಯವಾಗಿರಲಿಲ್ಲ. ಸರ್ವೇ ಕಾರ್ಯದ ಸಂದರ್ಭದಲ್ಲಿ ನಕ್ಷೆಗಳ ಹೊಂದಾಣಿಕೆಯೂ ಸರಿಯಾಗಿರದ ಕಾರಣ ತ್ವರಿತ ಕಡತ ವಿಲೇವಾರಿಗೆ ತೊಂದರೆಯಾಗಿತ್ತು.
ಕೆಲವು ವ್ಯಕ್ತಿಗಳು ನ್ಯಾಯಾಲಯದ ಮೊರೆ ಹೋಗಿದ್ದು, ರಸ್ತೆ ಅಗಲೀಕರಣ ಕಾಮಗಾರಿ ವೇಗಕ್ಕೆ ತಡೆ ಬಿದ್ದಂತಾಗಿತ್ತು. ಆದರೂ ಇಲಾಖೆ ಜಾಗದ ಮಾಲೀಕರ ಜತೆಗೆ ಮಾತುಕತೆ ನಡೆಸಿ ಮನವೊಲಿಸಿ ೭ ಮೀಟರ್ ಅಗಲದ ರಸ್ತೆಯನ್ನು ಪೂರ್ಣಗೊಳಿಸುವಲ್ಲಿ ಯಶಸ್ವಿಯಾಗಿದೆ.
ಚರಂಡಿಗೆ ಸಮಸ್ಯೆ: ಪೇಟೆಯ ನೀರು ಹೊರಹೋಗುವ ಭಾಗದಲ್ಲಿ ಪಟ್ಟಣ ಪಂಚಾಯಿತಿ ಕಿರಿದಾದ ಮೋರಿ ಅಳವಡಿಕೆ ಮಾಡಿದ ಕಾರಣ ಪೇಟೆಯ ನೀರು ರಸ್ತೆಯಲ್ಲಿ ಹರಿಯುವ ಪರಿಸ್ಥಿತಿ ಇದೆ. ಲೋಕೋಪಯೋಗಿ ಇಲಾಖೆ ಕೆಲಸ ಮಾಡುವ ಸಂದರ್ಭದಲ್ಲೂ ಜಾಗ ಬಿಟ್ಟು ಕೊಡಿಸುವಲ್ಲಿ ಸ್ಥಳೀಯಾಡಳಿತ ಸರಿಯಾದ ಸ್ಪಂದನೆ ನೀಡಿಲ್ಲ. ಇದರಿಂದ ಈ ಸಮಸ್ಯೆ ಹಾಗೇ ಉಳಿದುಕೊಂಡಿದೆ. ವಿಟ್ಲ-ಮಂಗಳೂರು ರಸ್ತೆಯಲ್ಲಿ ಈ ಮಳೆಗಾಲದಲ್ಲೂ ನೀರು ಉಕ್ಕಿ ಹರಿದು, ಅಂಗಡಿಗಳಿಗೆ ನುಗ್ಗುವ ಸಾಧ್ಯತೆ ಇದೆ ಎಂಬುದು ಜನಸಾಮಾನ್ಯರ ಮಾತಾಗಿದೆ.
ಮಳೆಗಾಲದ ಮೊದಲು ಕೆಲಸ
ಜನವರಿಯಲ್ಲಿ ಕೆಲಸ ಪ್ರಾರಂಭವಾಗುತ್ತಿದ್ದಂತೆ ಅಡಚಣೆಗಳು ಪ್ರಾರಂಭವಾಗಿದ್ದವು. ಕೆಲವು ಭಾಗದಲ್ಲಿ ರಸ್ತೆಯನ್ನು ಅಗೆದು ಹಾಕಲಾಗಿದ್ದರೂ, ಸಮಸ್ಯೆಯಿಂದ ಕೆಲಸ ಪೂರ್ಣ ಮಾಡಲಾಗದೆ ಬಿಡಲಾಗಿತ್ತು. ಇದರಿಂದ ಜನಸಾಮಾನ್ಯರಿಗೆ ನಿತ್ಯಸಮಸ್ಯೆಯಾಗಿ ಪರಿಣಮಿಸಿತ್ತು. ಸಮಸ್ಯೆ ಸರಿಯಾಗದೆ ಹೋದರೆ ಮಳೆಗಾಲದಲ್ಲಿ ವಿಟ್ಲ ಪೇಟೆಯ ಭಾಗದಲ್ಲಿ ಸಂಚಾರಕ್ಕೇ ಕಷ್ಟ ಎನ್ನುವ ಅಭಿಪ್ರಾಯ ಕೇಳಲಾರಂಭಿಸಿತ್ತು. ಆದರೆ ಇಲಾಖೆಯ ಅಽಕಾರಿಗಳ ಪ್ರಯತ್ನದಿಂದ ಮಳೆಗಾಲ ಪ್ರರಂಭಕ್ಕೂ ಮೊದಲೇ ಕೆಲಸ ಪೂರ್ಣಗೊಂಡಿದೆ.
ವಿಜಯವಾಣಿ ಸತತ ವರದಿ
ರಸ್ತೆ ಸಮಸ್ಯೆಯ ಬಗ್ಗೆ ವಿಜಯವಾಣಿ ನಿರಂತರ ವರದಿಯನ್ನು ಪ್ರಕಟಿಸಿ ಜಿಲ್ಲಾಡಳಿತ ಹಾಗೂ ಜನಪ್ರತಿನಿಽಗಳು ಮದ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆ ಹರಿಸುವ ಅನಿವಾರ್ಯತೆಯನ್ನು ತಿಳಿಸಿತ್ತು. ಆ ಬಳಿಕ ಕೆಲವು ವ್ಯಕ್ತಿಗಳು ತಮ್ಮ ನಿರ್ಧಾರ ಸಡಿಲಿಸಿ ರಸ್ತೆ ನಿರ್ಮಾಣಕ್ಕೆ ಇದ್ದ ತೊಂದರೆಯನ್ನು ನಿವಾರಿಸಿದ್ದಾರೆ.
ಚರಂಡಿ - ತಡೆಗೋಡೆ
ಕಾಶಿ ಮಠದ ಭಾಗದಲ್ಲಿ ರಸ್ತೆ ಕಿರಿದಾಗಿದ್ದು, ಮುಂಭಾಗದಿಂದ ಬರುವ ವಾಹನ ವಾಹನಗಳ ಮಾಹಿತಿ ಸಿಗದೆ ಪಕ್ಕದ ಚರಂಡಿಯೊಳಗೆ ಬೀಳುತ್ತಿದ್ದವು. ಆದರೆ ಅದನ್ನು ತಡೆಗೋಡೆ ನಿರ್ಮಾಣ ಮಾಡುವ ಮೂಲಕ ಸರಿಪಡಿಸುವ ಕಾರ್ಯವನ್ನು ಮಾಡಿದ್ದಾರೆ. ಕೆಲವು ಭಾಗದಲ್ಲಿ ಚರಂಡಿಯನ್ನು ಸರಿಪಡಿಸಿದರೆ, ಅಗತ್ಯ ಇರುವ ಪ್ರದೇಶದಲ್ಲಿ ತಡೆಗೋಡೆಯನ್ನು ನಿರ್ಮಾಣ ಮಾಡಿದ್ದಾರೆ.
ಬದಿಯಲ್ಲಿ ಜಾಗ ಇಲ್ಲ!
ಅವಕಾಶ ಇರುವ ಸ್ಥಳದಲ್ಲಿ ರಸ್ತೆಯಲ್ಲಿ ೮ರಿಂದ ೯ ಮೀಟರ್ ಅಗಲಕ್ಕೆ ಮಾಡಲಾಗಿದ್ದು, ಜಾಗದ ತಕರಾರುಗಳಿಂದಾಗಿ ಕೆಲವು ಪ್ರದೇಶದಲ್ಲಿ ರಸ್ತೆಯಿಂದ ಇಳಿದರೆ ನೇರ ಚರಂಡಿ ಅಥವಾ ಕೆಲವು ಭಾಗದಲ್ಲಿ ಅಂಗಡಿ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. ಪೇಟೆಯ ಒಳಗೆ ವಾಹನಗಳೂ ರಸ್ತೆಯಲ್ಲೇ ನಿಲ್ಲುವುದರಿಂದ ಅಗಲೀಕರಣಗೊಂಡು ಪ್ರಯೋಜನ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.