ಜಿಲ್ಲೆ

ದೇವರಿಗೆ ಬಡಿದ ಡ್ರೋನ್ - ವಿಟ್ಲ ಜಾತ್ರೆಯ ರಥೋತ್ಸವದಲ್ಲಿ ಸಂಭವಿಸಿದ ಅಚಾತುರ್ಯ

Mangaluru - Nishantha Narayana

ಪುತ್ತೂರು: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಮಹಾರಥೋತ್ಸವದ ಸಂದರ್ಭದ ಅವೈಜ್ಞಾನಿಕವಾಗಿ ಹಾರಿದ ಡ್ರೋನ್ ನಿಯಂತ್ರಣ ಕಳೆದುಕೊಂಡು ದೇವರ ಕಡೆಗೆ ನುಗ್ಗಿದ್ದೂ ಅಲ್ಲದೆ ದಾಳಿಗೆ ಓರ್ವನನ್ನು ಗಾಯಗೊಳಿಸಿದೆ.

ದೇವಾಲಯದಲ್ಲಿ ಸುತ್ತು ಬಲಿ ನಡೆದ ಬಳಿಕ ರಥದ ಗದ್ದೆಗೆ ಬಂದು ದೇವರನ್ನು ಹೊತ್ತವರು ದೇವರ ಸಹಿತ ರಥ ಏರಿ ಸಭೀಕರತ್ತ ತಿರುಗುತ್ತಿದ್ದಂತೆ, ಡ್ರೋನ್ ದೇವರ ಕಡೆಗೆ ಹಾರಿ ಬಂದಿದೆ. ದೇವರ ಅಲಂಗಾರದ ಅಟ್ಟೆಯ ಬಲ ಭಾಗಕ್ಕೆ ಹೊಡೆದು, ದೇವರನ್ನು ಹೊತ್ತವರ ಜತೆಗೆ ಇದ್ದ ತಂತ್ರಿವರ್ಗದ ಸಹಾಯಕರ ತಲೆಗೆ ಹೊಡೆದಿದೆ. ಅದರ ರೆಕ್ಕೆಗಳ ಏಟಿಗೆ ತಲೆಗೆ ಗಾಯವಾಗಿದೆ. ರಥ ಏರುವ ಸ್ಥಳದಲ್ಲಿ ಬಿದ್ದ ಡ್ರೋನ್ ಅನ್ನು ಹೊರ ಎಸೆಯಲಾಗಿದೆ. ಸ್ಥಳೀಯರಿಗೆ ಸೇರಿದ ಡ್ರೋನ್ ಇದು ಎಂದು ಹೇಳಲಾಗಿದೆ. ತಂತ್ರಿಗಳ ಸಹಾಯಕರಾದ ಮದೂರು ಸಮೀಪದ ಮೊಟ್ಟತ್ತೋಡಿ ಕೃಷ್ಣ ಪ್ರಸಾದ್ ಎಂಬರಿಗೆ ಡ್ರೋನ್ ಹೊಡೆದಿದೆ.

ಕಳೆದ ವರ್ಷ ದೀಪಾವಳಿಯ ಸಂದರ್ಭ ಉತ್ಸವ ಮೂರ್ತಿಗೆ ಬಿನ್ನವಾಗಿತ್ತು. ಕಳೆದ ಜಾತ್ರೆಯ ಸಂದರ್ಭ ದೇವರು ತಲೆಯಿಂದ ಬಿದ್ದಿದ್ದು, ಕೆಲವು ವರ್ಷಗಳಿಂದ ವಿವಿಧ ರೀತಿಯ ಅವಘಡಗಳು ದೇವಸ್ಥಾನದಲ್ಲಿ ನಡೆಯುತ್ತಿವೆ ಎಂದು ಸಾರ್ವಜನಿಕರು ಮಾತನಾಡುತ್ತಿದ್ದಾರೆ. ಬ್ರಹ್ಮಕಲಶೋತ್ಸವದ ಅಂಗವಾಗಿ ತಿಂಗಳ ಹಿಂದೆ ನಡೆದ ಪ್ರಶ್ನಾ ಚಿಂತನೆಯ ಸಂದರ್ಭದಲ್ಲೂ ಮಾತಿನ ಚಕಮಕಿ ನಡೆದಿದೆ.