ವಿಟ್ಲ: ನಗರೋತ್ಥಾನ ಹಾಗೂ ೧೫ನೇ ಹಣಕಾಸು ಯೋಜನೆಯ ಅನುದಾನ ಹಂಚಿಕೆಯಲ್ಲಿ ಬಿಜೆಪಿ ಬೆಂಬಲಿತ ೧೨ ಮಂದಿ ಸದಸ್ಯರನ್ನು ಕಡೆಗಣಿಸಲಾಗಿದೆ. ಶಾಸಕರು ಅನುದಾನವನ್ನು ಎಲ್ಲರಿಗೂ ಸಮನಾಗಿ ಹಂಚಬೇಕು ಎಂದು ಆಗ್ರಹಿಸಿ ಸೆ.೭ರಂದು ಪಟ್ಟಣ ಪಂಚಾಯಿತಿ ಮುಂಭಾಗದಲ್ಲಿ ಧರಣಿಯನ್ನು ನಡೆಸುವ ಮೂಲಕ ನ್ಯಾಯವನ್ನು ಯಾಚಿಸಲಿದ್ದೇವೆ. ಸ್ಥಳಕ್ಕೆ ಯೋಜನಾ ನಿರ್ದೇಶಕರು ಹಾಗೂ ಆಡಳಿತಾಧಿಕಾರಿಗಳು ಆಗಮಿಸಿ ಮನವಿಯನ್ನು ಸ್ವೀಕಾರ ಮಾಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ಎಂ. ವಿಟ್ಲ ಹೇಳಿದರು.
ಹಿಂದಿನ ಶಾಸಕರ ಅವಧಿಯಲ್ಲಿ ನಗರೋತ್ಥಾನದ ೭೪.೦೧ಲಕ್ಷ ಅನುದಾನಕ್ಕೆ ಕ್ರಿಯಾಯೋಜನೆಯನ್ನು ತಯಾರಿಸಿ ೨೦ಲಕ್ಷ ವೆಚ್ಚದಲ್ಲಿ ೪ ಕಡೆಗಳಲ್ಲಿ ಸ್ವಾಗತ ಕಮಾನು ಹಾಗೂ ೫೪.೦೧ಲಕ್ಷದಲ್ಲಿ ನೂತನ ವಾಣಿಜ್ಯ ಕಟ್ಟಡ ರಚನೆಗೆ ವಿಂಗಡಿಸಲಾಗಿತ್ತು. ಚುನಾವಣೆಯ ಬಳಿಕ ಹೊಸದಾಗಿ ಆಯ್ಕೆಯಾದ ಶಾಸಕರು ಇದನ್ನು ಸದಸ್ಯರ ಗಮನಕ್ಕೆ ತಾರದೇ ಬದಲಾವಣೆ ಮಾಡುವ ಮೂಲಕ ಬೇರೆ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಕಾಮಗಾರಿಗಳನ್ನು ಬದಲಾವಣೆ ಮಾಡದಂತೆ ಮುಖ್ಯಾಧಿಕಾರಿಗಳಿಗೆ ಆಕ್ಷೇಪಣೆಯನ್ನು ಸಲ್ಲಿಸುವ ಕಾರ್ಯ ಮಾಡಲಾಗಿತ್ತು. ೧೫ನೇ ಹಣಕಾಸು ಯೋಜನೆಯಲ್ಲಿ ಸುಮಾರು ೪೨.೪೮ಲಕ್ಷ ಉಳಿಕೆ ಹಣದ ಕ್ರೀಯಾ ಯೋಜನೆಯನ್ನೂ ಸದಸ್ಯರ ಗಮನಕ್ಕೆ ತಾರದೆ ಮಾಡಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ತಿಳಿಸಿದರು.
ವಿಟ್ಲ ಪೇಟೆಯಲ್ಲಿ ರಸ್ತೆಯ ಬದಿಯಲ್ಲಿ ಅಕ್ರಮ ಕಟ್ಟಡಗಳು ತಲೆಯೆತ್ತುತ್ತಿದ್ದು, ಕೆಲವು ಭಾಗದಲ್ಲಿ ಬಹುಮಹಡಿ ಮನೆಗಳ ನಿರ್ಮಾಣವಾಗುತ್ತಿದೆ. ಪಟ್ಟಣ ಪಂಚಾಯಿತಿಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುವ ಜತೆಗೆ ಪ್ರತಿಯೊಂದಕ್ಕೂ ಕಮಿಷನ್ ದಂಧೆ ನಡೆಯುತ್ತಿದೆ. ಕೆಲವು ಸದಸ್ಯರು ಹಾಗೂ ಸದಸ್ಯರ ಮನೆಯವರು ಪಟ್ಟಣ ಪಂಚಾಯಿತಿಯಲ್ಲಿ ಮಧ್ಯವರ್ತಿಗಳಾಗಿ ಅಧಿಕಾರಿಗಳನ್ನು ಸಮರ್ಪಕವಾಗಿ ಕೆಲಸ ಮಾಡಲು ಅಡ್ಡಿಪಡಿಸುತ್ತಿದ್ದಾರೆ. ಬ್ರಷ್ಟಾಚಾರ ವಿರೋಧಿಯಾದ ಶಾಸಕರು ಇದನ್ನು ನಿಯಂತ್ರಿಸುವ ಕಾರ್ಯವಾಗಬೇಕಾಗಿದೆ. ಸ್ಮಶಾನದ ಕೆಲಸ ಪೂರ್ಣ ಮಾಡುವ ನಿಟ್ಟಿನಲ್ಲಿ ೫ಲಕ್ಷವನ್ನು ಬಿಡುಗಡೆ ಮಾಡುವಂತೆ ಮನವಿಯನ್ನು ಮಾಡಲಾಗಿದೆ ಎಂದು ತಿಳಿಸಿದರು.
ಬಿಜೆಪಿ ಗ್ರಾಮಾಂತರ ಮಂಡಲ ಸದಸ್ಯ ಮೋಹನದಾಸ ಉಕ್ಕುಡ, ವಿಟ್ಲ ಮಹಾ ಶಕ್ತಿ ಕೇಂದ್ರದ ಸದಸ್ಯ ರಾಮದಾಸ ಶೆಣೈ, ಪಟ್ಟಣ ಪಂಚಾಯಿತಿ ಸದಸ್ಯರಾದ ಅಶೋಕ್ ಕುಮಾರ್ ರೈ, ಹರೀಶ್ ಸಿ. ಎಚ್., ವಿಜಯಲಕ್ಷ್ಮೀ, ಸುನಿತಾ ಪೂಜಾರಿ, ರಕ್ಷಿತಾ ಸನತ್, ಸಂಗೀತ, ಜಯಂತ್ ಚಂದಪ್ಪಾಡಿ, ಕರುಣಾಕರ ನಾಯ್ತೊಟ್ಟು, ಎನ್. ಕೃಷ್ಣ ಉಪಸ್ಥಿತರಿದ್ದರು.