ಸಾಗರ: ಸತತ ಏಳು ದಶಕಗಳ ಕಾಲ ಯಕ್ಷಗಾನ ಅರ್ಥಧಾರಿಯಾಗಿ ದಕ್ಷಿಣೋತ್ತರ ಕನ್ನಡ ಜಿಲ್ಲೆಯಲ್ಲಿ ಹೆಸರು ಮಾಡಿರುವ ಎಂ.ಆರ್.ಲಕ್ಷ್ಮೀನಾರಾಯಣ್ ಅಮಚಿ ಅವರು ಬಹು ವಿಧದ ಅರ್ಥಧಾರಿ. ಎಲ್ಲರ ಜತೆ ಒಂದಾಗುವ ಕಲಾವಿದರು. ಅವರದು ದೀಪಸ್ತಂಭ ಆದರ್ಶದ ಬದುಕು ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಉಜಿರೆಯ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ್ ಭಟ್ ಹೇಳಿದರು.
ತಾಲೂಕಿನ ಮಡಸೂರು-ಲಿಂಗದಹಳ್ಳಿಯಲ್ಲಿ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಮತ್ತು ಸ್ನೇಹ ಬಳಗ ಎಂ.ಎಲ್.ಹಳ್ಳಿ ಹಾಗೂ ಯಕ್ಷ ಪ್ರಪಂಚ ಸಾಗರ, ಯಕ್ಷಶ್ರೀ ವಿಜಯ ಸೇವಾ ಟ್ರಸ್ಟ್ ಬುಧವಾರ ಏರ್ಪಡಿಸಿದ್ದ ರಜತವರ್ಪ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಹಿರಿಯ ತಾಳಮದ್ದಳೆ ಅರ್ಥಧಾರಿ ಎಂ.ಆರ್.ಲಕ್ಷ್ಮೀನಾರಾಯಣ್ ಅಮಚಿ ಅವರಿಗೆ ವಿಠಲಶಾಸ್ತ್ರಿ ಗೌರವ ಸಮರ್ಪಿಸಿ ಮಾತನಾಡಿದರು.
ಎಂ.ಆರ್.ಎಲ್. ಅವರು ಏಳು ದಶಕಗಳ ಕಾಲ ತಿರುಗಾಟ ಮಾಡಿ ದಾಖಲೆ ನಿರ್ಮಿಸಿದ್ದಾರೆ. ನಾಲ್ಕು ತಲೆಮಾರಿನ ಅರ್ಥಧಾರಿಗಳ ಜತೆ ಒಡನಾಟವಿದೆ. ಯಕ್ಷಗಾನದ ಸಮಗ್ರ ಅನುಭವ ಅವರಿಗಿದೆ. ಸಮಾಜದಲ್ಲಿ ಎಲ್ಲವನ್ನೂ ಕಂಡು ಉಂಡಿರುವ ಅವರು ಹಿರಿ-ಕಿರಿಯ ಕಲಾವಿದರಿಗೆ ಮಾರ್ಗದರ್ಶನ ಮಾಡಬೇಕು ಯಕ್ಷರಂಗದ ಇವರ ಅನುಭವ ಮುಂದಿನ ತಲೆಮಾರಿಗೆ ತಲುಪಬೇಕು ಎಂದರು.
ಕುರಿಯ ವಿಠಲಶಾಸ್ತ್ರಿಗಳು ಉತ್ತರ ಕನ್ನಡ ಜಿಲ್ಲೆಯಲ್ಲಿ ಧರ್ಮಸ್ಥಳ ಮೇಳವನ್ನು ಪೋಷಿಸಿದವರು. ರಂಗ ಪದ್ಧತಿ, ರಂಗ ಚಲನೆ ಮುಂತಾದ ವಿಷಯ ಕುರಿತು ಯಕ್ಷಗಾನದ ಆವಿಷ್ಕಾರ ಮಾಡಿದವರು. ಯಕ್ಷಗಾನದ ಸಮಗ್ರ ಚಿತ್ರಣ ನೀಡಿದ ಖ್ಯಾತಿ ಅವರಿಗೆ ಸೇರುತ್ತದೆ ಎಂದರು.
ವಿಜಯ ಸೇವಾ ಟ್ರಸ್ಟ್‌ನ ಡಾ. ಎಚ್.ಎಸ್.ಮೋಹನ್ ಮಾತನಾಡಿ, ಮಲೆನಾಡಿನಲ್ಲಿ ಯಕ್ಷಗಾನ ಅರ್ಥಧಾರಿಯಾಗಿ ಒಳ್ಳೆಯ ಹೆಸರನ್ನು ಎಂ.ಆರ್.ಎಲ್. ಮಾಡಿದ್ದಾರೆ. ಶೇಣಿ, ಸಾಮಗ, ತೆಕ್ಕಟ್ಟೆ, ಜೋಶಿ ಮುಂತಾದ ದಿಗ್ಗಜ ಅರ್ಥಧಾರಿಗಳ ಎದುರು ಸಮರ್ಥವಾಗಿ ಅರ್ಥ ಹೇಳಿದ ಹೆಗ್ಗಳಿಕೆ ಅವರದು. ಗಮಕ ವ್ಯಾಖ್ಯಾನದಲ್ಲೂ ಅವರು ಛಾಪು ಮೂಡಿಸಿದ್ದಾರೆ. ರಾಮಾಯಣ, ಮಹಾಭಾರತ ಅಧ್ಯಯನ ಮಾಡಿಕೊಂಡು ಯಕ್ಷಗಾನ ಪ್ರಸಂಗ ರಚಿಸಿದ್ದಾರೆ. ಅವರದು ಬಹುಮುಖ ಪ್ರತಿಭೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಯಕ್ಷ ಪ್ರಪಂಚದ ಎಂ.ಎಲ್.ಭಟ್, ಕಟ್ಟಿನಕೆರೆ ಸೀತಾರಾಮಯ್ಯ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಲಕ್ಷ್ಮೀನಾರಾಯಣ್ ಅವರನ್ನು ಅಭಿನಂದಿಸಿದರು
ಶ್ರೀಕೃಷ್ಣ ಸಂಧಾನ ತಾಳಮದ್ದಳೆ ನಡೆಯಿತು. ಹಿಮ್ಮೇಳದಲ್ಲಿ ಕೊಳಗಿ ಕೇಶವ ಹೆಗಡೆ, ಮಂಜುನಾಥ ಗುಡ್ಡೆದಿಂಬ, ಭಾರ್ಗವ ಹೆಗ್ಗೋಡು, ಅರ್ಥಧಾರಿಗಳಾಗಿ ಎಂ.ಆರ್.ಲಕ್ಷ್ಮೀನಾರಾಯಣ್ ಅಮಚಿ, ವಿದ್ವಾನ ಉಮಾಕಾಂತ ಭಟ್, ಅಶೋಕ್ ಭಟ್ ಉಜಿರೆ, ರಾಧಾಕೃಷ್ಣ ಕಲ್ಚಾರ್ ಭಾಗವಹಿಸಿದ್ದರು. ಸ್ನೇಹ ಬಳಗದ ಅಧ್ಯಕ್ಷ ರಾಜಕುಮಾರ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಮಾಮಹೇಶ್ವರ ಇತರರಿದ್ದರು.
ಈ ಭಾಗದ ಸುತ್ತಮುತ್ತಲಿನ ಒಡನಾಡಿಗಳು, ಸಮುದಾಯ ನನಗೆ ಪ್ರೋತ್ಸಾಹ ನೀಡಿದ್ದರಿಂದ ಯಕ್ಷಗಾನ ಅರ್ಥಧಾರಿಯಾಗಿ ಬೆಳೆಯಲು ಕಾರಣವಾಯಿತು. ಅವರಿಗೆ ಈ ಗೌರವ ಸಲ್ಲಬೇಕು. ಒಬ್ಬರಿಂದ ಯಾವುದೇ ಸಾಧನೆ ಸಾಧ್ಯವಿಲ್ಲ. ದಕ್ಷಿಣ ಕನ್ನಡದಲ್ಲಿ ಉತ್ತಮ ಸ್ನೇಹಿತರಿದ್ದು ಸಮರ್ಥ ಅರ್ಥಧಾರಿಯಾಗಲು ಅವರ ಸಹಕಾರವನ್ನು ಮರೆಯುವಂತಿಲ್ಲ.ಎಂ.ಆರ್.ಲಕ್ಷ್ಮೀ ನಾರಾಯಣ್ ಅಮಚಿ, ಯಕ್ಷಗಾನ ಅರ್ಥಧಾರಿ