ಬೆಳಗಾವಿ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ ಅನರ್ಹತೆ ವಿಚಾರವಾಗಿ ಹೈಕೋರ್ಟ್‌ನಲ್ಲಿ ಹಿನ್ನಡೆ ಯಾಗಿರುವುದು ನಿಜ. ಹೈಕೋರ್ಟ್ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ರಚನೆಗಾಗಿ ತ್ಯಾಗ ಮಾಡಿರುವ 17 ಶಾಸಕರು ಒಗ್ಗಟ್ಟಾಗಿದ್ದೇವೆ. ನಮ್ಮ ಮಧ್ಯೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿರುವುದನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತೇವೆ ಎಂದರು.
ದೇವರ ಮುಂದೆ ಸುಳ್ಳು ಆಣೆ, ಪ್ರಮಾಣ ಮಾಡಿದ್ದಕ್ಕೆ ನ್ಯಾಯಾಂಗದಲ್ಲಿ ಶಿಕ್ಷೆಯಾಗಿದೆ ಎಂದು ಶಾಸಕ ಸಾ.ರಾ. ಮಹೇಶ ಹೇಳಿಕೆಗೂ ಹೈಕೋರ್ಟ್ ಆದೇಶಕ್ಕೂ ಯಾವುದೇ ಸಂಬಂಧವಿಲ್ಲ. ರಾಜಕೀಯದಲ್ಲಿ ಯಾವ ಶಾಪವೂ ನಡೆಯಲ್ಲ. ಹಾಗಾಗಿ ನಾವೆಲ್ಲ ಎಚ್.ವಿಶ್ವನಾಥ ಪರವಾಗಿ ನಿಲ್ಲುತ್ತೇವೆ. ಎಷ್ಟೇ ಕಷ್ಟ ಬಂದರೂ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಶಾಸಕರ ಅನರ್ಹತೆ ವಿಷಯದಲ್ಲಿ ಸುಪ್ರೀಂ ಕೋರ್ಟ್ ನಮ್ಮ ಪರವಾಗಿಯೇ ಆದೇಶ ಹೊರಡಿಸಿದೆ. ವಿಶ್ವನಾಥ ಅವರು ಹಿಂಜರಿಯುವ ಅವಶ್ಯಕತೆ ಇಲ್ಲ. ಮುಂದಿನ ಹೋರಾಟವನ್ನು ಒಗ್ಗಟ್ಟಿನಿಂದಲೇ ಎದುರಿಸುತ್ತೇವೆ. ಸಿ.ಪಿ.ಯೋಗೇಶ್ವರ ಅವರಿಗೆ ಸಚಿವ ಸ್ಥಾನ ಸಿಗುವುದು ಖಚಿತ. ಈ ವಿಷಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.