ಮೈಸೂರು: ವೇಗವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ನಾವು ದಂತ ಗೋಪುರದಲ್ಲಿ ಕುಳಿತಂತಾಗಿ ದೃಶ್ಯ ಕಲೆ ಇವತ್ತು ಕೆಳಮುಖವಾಗುತ್ತಿದೆ ಎಂದು ಕರ್ನಾಟಕ ಲಲಿತಕಲಾ ಅಕಾಡೆಮಿ ಮಾಜಿ ಅಧ್ಯಕ್ಷ ಡಾ.ಎಂ.ಎಸ್ ಮೂರ್ತಿ ಬೇಸರ ವ್ಯಕ್ತಪಡಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ವಿಶ್ವವಿದ್ಯಾನಿಲಯ ಸಂಶೋದಕರ ಸಂಘ, ಕಾವಾ ಅಲ್ಯೂಮಿನಿ ಅಸೋಸೊಯೇಷನ್, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಬೀದಿ ನಾಟಕಗಳು, ಚಿತ್ರಕಲಾ ರಚನಾ ಕಮ್ಮಟ, ವಿಚಾರ ಸಂಕಿರಣ, ರಂಗ ತರಬೇತಿ ಶಿಬಿರ, ರಂಗಪ್ರಸ್ತುತಿ, ರಂಗ ಗೀತೆಗಳು, ರಂಗ ಗೌರವ ಕುರಿತು ಮನುಷ್ಯತ್ವದೆಡೆಗೆ ಸಮುದಾಯ-50 ಮೂರು ದಿನಗಳ ‘ಸಮುದಾಯ ಮೈಸೂರು ರಂಗೋತ್ಸವ’ ಕಲಾಶಿಬಿರದ ಉದ್ಘಾಟನೆಯಲ್ಲಿ ಅವರು ಮಾತನಾಡಿದರು.
ಕಲಾವಿದರು ಸಭೆ, ಸಮಾರಂಭದಲ್ಲಿ ಭಾಗಿಯಾಗುವುದು, ಪ್ರಶಸ್ತಿ ಪಡೆಯುವುದರಿಂದ ಬದುಕಿನ ಸಾರ್ಥಕತೆ ಪಡೆದುಕೊಳ್ಳುವುದಿಲ್ಲ. ಈ ನೆಲದ ಸಂಸ್ಕೃತಿ ಜತೆಗೆ ಬೆರೆಯುವ ಮೂಲಕವೇ ನಮ್ಮ ಸಾರ್ಥಕತೆಯನ್ನು ಕಂಡುಕೊಳ್ಳಬೇಕು ಎಂದರು.
ಬಾಹುಬಲಿಗೆ ಕಲಾಕೃತಿಗೆ 1500 ವರ್ಷಗಳ ಇತಿಹಾಸವಿದೆ. ಆದರೆ ಇಂದಿಗೂ ಹಲವು ಕಲಾವಿದರು ಅದನ್ನು ನೋಡಿಯೇಯಿಲ್ಲ. ಇದೊಂದು ಬೇಸರದ ಸಂಗತಿ. ಅದೊಂದು ಕೇವಲ ಜೈನರ ಕಲಾಕೃತಿಯಲ್ಲ. ಎಲ್ಲ್ಲ ಜನಪದರ ಕಲಾಕೃತಿ, ನೋಡುಗನ ಮೂರ್ತಿ. ಅದನ್ನು ನಾವು ಅನುಭವಿಸುತಿಲ್ಲ. ಆದರೆ ಅದಾದ 600 ವರ್ಷಗಳ ನಂತರ ಬಂದ ಮೈಕಲೆಂಜಿಲೊ, ಪಿಕಾಸೋ, ಡಾವೆಂಚಿ ಬಗ್ಗೆ ಮಾತನಾಡುತ್ತೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಮ್ಮ ನೆಲೆದ ಕಲಾವಿರ ಪರಂಪರೆಯ ಬಗ್ಗೆ, ನೆಲೆದ ಪ್ರಜ್ಞೆ, ಸಂಸ್ಕೃತಿ, ರೈತರ ಬಗ್ಗೆ ನೆನೆಯುತಿಲ್ಲ. ಕಲಾವಿದರಾಗಿ ವ್ಯರ್ಥ. ಇದಾಗದಿದ್ದರೆ ಕೇವಲ ಕಸುಬುದಾರಿಕೆ ಕೆಲಸ, ಕೌಶಲವಾಗಿ ಕಲೆ ಉಳಿಯುತ್ತದೆಯೇ ಹೊರತು, ಕಲಾಕೃತಿಯ ಮೌಲ್ಯವಾಗಿ ಉಳಿಯುವುದಿಲ್ಲ. ಆ ಮೌಲ್ಯ ನಮ್ಮ ಅಂತರಗತವಾದ ಬದುಕಿನ ಮೌಲ್ಯವಾಗಿ ಕಲಾಕೃತಿಯಲ್ಲಿ ಮೂಡಬೇಕು. ಇಲ್ಲದಿದ್ದರೆ ಕಲಾಕೃತಿಗೆ ಅರ್ಥ, ಭವಿಷ್ಯವಿರುವುದಿಲ್ಲ ಎಂದು ಎಚ್ಚರಿಸಿದರು.
ಕಲಾವಿದರೂ ಸಮುದಾಯದೊಂದಿಗೆ ಬೆರೆಯುವ ಕೆಲಸವಾಗಬೇಕು. ವೇದಿಕೆ ನಿರ್ಮಿಸಿ ಕಲಾವಿದರನ್ನು, ಸಂಗೀತಗಾರನನ್ನು, ಜನಪದ ತಜ್ಞನನ್ನು, ಸಾಮಾನ್ಯ ವ್ಯಕ್ತಿಯನ್ನು ಕೆರತಂದು ಚರ್ಚಿಸುವ ಕೆಲಸದ ಸಂಪ್ರದಾಯವನ್ನು ನಾವು ಬಹಳ ಹಿಂದೆಯೇ ನಡೆಸಬೇಕಿತ್ತು ಎಂದರು.
ದೃಶ್ಯ ಕಲಾಪಂಪರೆ ಅಕಾಡೆಮಿ ಪ್ರಕಾರ 60 ವರ್ಷಗಳನ್ನು ದಾಟಿದೆ. ಈ ಪರಂಪರೆ ಹಿರಿತನದ್ದು, ಜನಪದ ಪ್ರಜ್ಞೆಯ ನೆಲೆಯಿಂದ ಬಂದಿರುವ ಈ ಬಹುದೊಡ್ಡ ಸಂವಹನ ಭಾಷೆಯನ್ನು ನಾವು ನಿರ್ಲಕ್ಷೃವಹಿಸುತ್ತಿರುವುದು ಅವಮಾನಕರವಾದದ್ದು. ಹೀಗಾಗಿ ದೃಶ್ಯಕಲೆಯ ಕಲಾವಿದರು ಪ್ರಜ್ಞಾವಂತರಾಗಬೇಕು, ಮನುಷ್ಯರಾಗಬೇಕು. ತಮ್ಮ ಸುತ್ತಲಿನ ಸಮಾಜದ ಆಗುಹೋಗುಗಳ, ದಕ್ಕುವಿಕೆಯ ಬಗ್ಗೆ ಸಾಮಾನ್ಯ ಪ್ರಜ್ಞೆ ಮೂಡಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಕಲಾನಿಕೇತನ ಕಲಾ ಶಾಲೆಯ ಪ್ರಾಂಶುಪಾಲ ಕೆ.ಸಿ ಮಹದೇವ ಶೆಟ್ಟಿ, ರವಿವರ್ಮ ಕಲಾ ಶಾಲೆಯ ಶಿವಕುಮಾರ್ ಕೆಸರಮಡು, ಕಾವಾ ಅಲ್ಯೂಮಿನಿ ಅಸೋಸಿಯೇಷನ್ ಅಧ್ಯಕ್ಷ ಆರ್.ಎಚ್ ಮಂಜುಪ್ರಸಾದ್, ಸಮುದಾಯ ಕರ್ನಾಟಕ ಉಪಾಧ್ಯಕ್ಷ ಬಿ.ಐ ಈಳಿಗೇರ, ರಂಗಾಯಣ ಮಾಜಿ ನಿರ್ದೇಶಕ ಜನಾರ್ದನ (ಜನ್ನಿ) ಇತರರು ಇದ್ದರು.
ಕಲಾಮಂದಿರ ಆವರಣದಲ್ಲಿ ವಿಸ್ಮಯ ಅಡ್ವಟೈಸರ್ಸ್, ಮೈಸೂರು ಕಲ್ಚರಲ್ ಅಸೋಸಿಯೇಷನ್, ಕಾವಾ ಅಲ್ಯೂಮಿನಿ ಅಸೋಸೊಯೇಷನ್ ಸಹಯೋಗದಲ್ಲಿ ಮನುಷ್ಯತ್ವದೆಡೆಗೆ ಸಮುದಾಯ- ಕಲಾ ಶಿಬಿರ ಹಮ್ಮಿಕೊಂಡಿದ್ದು 16 ಚಿತ್ರಕಲಾವಿದರೂ ಶಿಬಿರದಲ್ಲಿ ಭಾಗವಹಿಸಿದ್ದರು.