ಶಿಕ್ಷಣ ಸಚಿವ ಮಧು ಬಂಗಾರಪ್ಪ  
ಜಿಲ್ಲೆ

ವಿಐಎಸ್‌ಎಲ್ ಪುನರಾರಂಭ ಚುನಾವಣಾ ಗಿಮಿಕ್

ನವೀನ ಬಿ.ಎಂ

ಶಿವಮೊಗ್ಗ: ಭದ್ರಾವತಿ ವಿಐಎಸ್‌ಎಲ್ ಪುನರಾರಂಭ ಚುನಾವಣಾ ಗಿಮಿಕ್ ಇರಬಹುದು. ಯಾವುದಕ್ಕೂ ಬಿಜೆಪಿಯವರನ್ನು ನಂಬುವುದಕ್ಕೆ ಆಗುವುದಿಲ್ಲ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಆರಂಭಿಸಿದರೆ ಒಳ್ಳೆಯದು. ವಿಐಎಸ್‌ಎಲ್, ಎಂಪಿಎಂ ಭದ್ರಾವತಿಯ ಎರಡು ಕಣ್ಣುಗಳಿದ್ದಂತೆ. ಅಧಿಕಾರ ಅವರ ಕೈಯಲ್ಲಿತ್ತು. ಕೇಂದ್ರದಲ್ಲಿ ಅವರೇ ಇದ್ದಾರೆ. ಇಷ್ಟೊತ್ತಿಗೆ ಅದನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಬಹುದಿತ್ತು ಎಂದರು.
ಕಾರ್ಖಾನೆ ಮತ್ತೆ ಆರಂಭವಾದರೆ ಜಿಲ್ಲೆಯ ಕೈಗಾರಿಕಾ ಕ್ಷೇತ್ರದ ಬೆವಳವಣಿಗೆಗೆ ಅನುಕೂಲವಾಗುತ್ತದೆ. ಈಗಾಗಲೇ ಬಿಟ್ಟಿರುವ ಕಾರ್ಮಿಕರಿಗೆ ಪರಿಹಾರ ಕೊಡಬೇಕು. ಈ ಸಂಬಂಧ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಅವರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದರು.
ವೈಯಕ್ತಿಕ ನಿಂದನೆ ಬೇಡ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಕುರಿತು ನೀಡಿರುವ ಹೇಳಿಕೆ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಯಾಗಿದೆ. ಯಾರೇ ಆದರೂ ನಮ್ಮ ಕಾರ್ಯದ ಬಗ್ಗೆ ಮಾತನಾಡಬೇಕು. ಅದನ್ನು ಬಿಟ್ಟು ವೈಯಕ್ತಿಕವಾಗಿ ಟೀಕೆ ಮಾಡುವುದು ಒಳ್ಳೆಯದಲ್ಲ ಎಂದು ಮಧು ಬಂಗಾರಪ್ಪ ಹೇಳಿದರು. ಜ್ಞಾನೇಂದ್ರ ಕೂಡ ಖರ್ಗೆ ಅಲ್ಲ ಖಂಡ್ರೆ ಎಂದು ಹೇಳಿದ್ದಾರೆ. ರಾಜಕಾರಣಿಗಳು ಜನರಿಗೆ ಮಾದರಿ ಆಗಬೇಕು, ಕೆಟ್ಟವರಾಗಬಾರದು. ಇಂತಹ ಕೆಟ್ಟ ಸಂಪ್ರದಾಯಗಳು ನಿಲ್ಲಬೇಕು. ಮುಂದುವರಿಯುವುದು ಒಳ್ಳೆಯದಲ್ಲ. ಈ ವಿಚಾರದಲ್ಲಿ ಬಿಜೆಪಿಯವರು ಟೀಕೆ ಮಾಡುವ ಸ್ವಾತಂತ್ರೃವನ್ನೇ ಕಳೆದುಕೊಂಡಿದ್ದಾರೆ ಎಂದರು.

ಎಚ್‌ಡಿಕೆಗೆ ಶೋಭೆ ತರಲ್ಲ
ಪೊಲೀಸ್ ವರ್ಗಾವಣೆ ದಂಧೆ ಕುರಿತು ಹಲವು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆರೋಪ ಮಾಡಿದ್ದಾರೆ. ಇದು ಕುಮಾರಸ್ವಾಮಿಗೆ ಶೋಭೆ ತರುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ವಿಧಾನಸೌಧದಲ್ಲಿ ಪೆನ್‌ಡ್ರೈವ್ ತಂದರು. ಅಂತಹದೇನಾದರೂ ತಪ್ಪಾಗಿದ್ದರೆ ದೂರು ಕೊಟ್ಟರೆ ಸರಿಪಡಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ದಾಖಲೆ ಇಲ್ಲದೆ ಆರೋಪ ಮಾಡುವುದನ್ನು ಕುಮಾರಸ್ವಾಮಿ ನಿಲ್ಲಿಸಬೇಕು. ಇವರು ರಾಜ್ಯವನ್ನು ಆಳಿದವರು. ಜನರಿಗೆ ತಪ್ಪು ಮಾಹಿತಿ ಹೋಗದಂತೆ ಎಚ್ಚರ ವಹಿಸಬೇಕಿತ್ತು ಎಂದರು.