ಶಿವಮೊಗ್ಗ: ವಿಐಎಸ್‌ಎಲ್ ಮುಚ್ಚುವ ನಿರ್ಧಾರವನ್ನು ಕೇಂದ್ರ ಸರ್ಕಾರ ಮರು ಪರಿಶೀಲಿಸಬೇಕು ಎಂದು ಕೇಂದ್ರ ಉಕ್ಕು ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ. ವಿಐಎಸ್‌ಎಲ್ ಕಾರ್ಖಾನೆ ಪುನರಾರಂಭದ ಕುರಿತು ಕೇಂದ್ರ ಸರ್ಕಾರ ತನ್ನ ಬದ್ಧತೆ ಪ್ರದರ್ಶಿಸಬೇಕು ಎಂದು ಒತ್ತಾಯಿಸಿ ಜು.27ರಂದು ಪತ್ರ ಬರೆದಿದ್ದಾರೆ.
ಕರ್ನಾಟಕ ಸರ್ಕಾರದ ಅಧೀನದಲ್ಲಿದ್ದ ವಿಐಎಸ್‌ಎಲ್ ಕಾರ್ಖಾನೆಯನ್ನು ಆಧುನೀಕರಣದ ಉದ್ದೇಶದಿಂದ 1989ರಲ್ಲಿ ಭಾರತ ಸರ್ಕಾರಕ್ಕೆ ಒಪ್ಪಿಸಲಾಯಿತು. ಸರ್ ಎಂ.ವಿಶ್ವೇಶ್ವರಯ್ಯ ಅವರು ಸ್ಥಾಪಿಸಿದ ಕಾರ್ಖಾನೆ ಇದಾಗಿದೆ. ಕೆಮ್ಮಣ್ಣುಗುಂಡಿ ಭದ್ರಾ ಅಭಯಾರಣ್ಯ ವ್ಯಾಪ್ತಿಗೆ ಒಳಪಟ್ಟಿದ್ದರಿಂದ ಗಣಿಗಾರಿಕೆ ನಿಷೇಧಿಸಲಾಯಿತು. ಅಂದಿನಿಂದ ವಿಐಎಸ್‌ಎಲ್ ಕಾರ್ಖಾನೆಗೆ ಅದಿರು ಪೂರೈಕೆ ಸ್ಥಗಿತಗೊಂಡಿದೆ.
2015ರಿಂದ 2018ರವರೆಗೆ ಕೇಂದ್ರ ಉಕ್ಕು ಸಚಿವರು ಮೂರು ಬಾರಿ ವಿಐಎಸ್‌ಎಲ್ ಕಾರ್ಖಾನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ರಾಜ್ಯ ಸರ್ಕಾರ ವಿಐಎಸ್‌ಎಲ್‌ಗೆ ಗಣಿ ಮಂಜೂರು ಮಾಡಿದರೆ ಕಾರ್ಖಾನೆಯ ಅಧುನೀಕರಣಕ್ಕೆ ಒಂದು ಸಾವಿರ ಕೋಟಿ ರೂ.ನಿಂದ ಐದು ಸಾವಿರ ಕೋಟಿ ರೂ. ಹೂಡಿಕೆ ಮಾಡುವುದಾಗಿ ತಿಳಿಸಿದ್ದರು. 2017ರಲ್ಲಿ ಅಂದಿನ ರಾಜ್ಯ ಸರ್ಕಾರ ವಿಐಎಸ್‌ಎಲ್‌ಗೆ ಸಂಡೂರು ತಾಲೂಕಿನ ರಾಮದುರ್ಗದಲ್ಲಿ 150 ಎಕರೆ ಗಣಿ ಮಂಜೂರು ಮಾಡಿತ್ತು. ಅಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, 2024ರಲ್ಲಿ ಅದಿರು ಪೂರೈಕೆ ಆರಂಭವಾಗಲಿದೆ.
ವಿಐಎಸ್‌ಎಲ್ ಪುನಶ್ಚೇತನಕ್ಕೆ ರಾಜ್ಯ ಸರ್ಕಾರ ತನ್ನ ಮಾತು ಉಳಿಸಿಕೊಂಡಿದೆ. ಆದರೆ ಕೇಂದ್ರ ಸರ್ಕಾರ 2018ರಲ್ಲಿ ವಿಐಎಸ್‌ಎಲ್ ಕಾರ್ಖಾನೆ ಖಾಸಗೀಕರಣಕ್ಕೆ ಮುಂದಾಯಿತು. ಆದರೆ ಈತನಕ ಖಾಸಗಿಯವರು ಆಸಕ್ತಿ ತೋರಿಸದ ಹಿನ್ನೆಲೆ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರಕ್ಕೆ ಬಂದಿದೆ. ಕೇಂದ್ರ ಸರ್ಕಾರದ ನಿರ್ಧಾರಿಂದ ಭದ್ರಾವತಿಯ ಆರ್ಥಿಕತೆಗೆ ಕೊನೆಯ ಮೊಳೆ ಹೊಡೆದಂತಾಗುತ್ತದೆ. ಅಲ್ಲದೆ ಸರ್ ಎಂ.ವಿಶ್ವೇಶ್ವರಯ್ಯ ಅವರ ಕಲ್ಪನೆಯ ಕರ್ನಾಟಕದ ಭವ್ಯ ಪರಂಪರೆಗೂ ಪೆಟ್ಟು ಬೀಳಲಿದೆ. ಹಾಗಾಗಿ ಕೇಂದ್ರ ಸರ್ಕಾರ ಕಾರ್ಖಾನೆ ಕುರಿತು ತನ್ನ ನಿರ್ಧಾರವನ್ನು ಮರುಪರಿಶೀಲಿಸುವುದು ಉತ್ತಮ ಎಂದು ಮನವಿ ಮಾಡಿದ್ದಾರೆ.