ಜಿಲ್ಲೆ

ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿ

ಮೈಸೂರು: ಜಿಲ್ಲೆಯಲ್ಲಿರುವ ಸ್ಕ್ಯಾನಿಂಗ್ ಸೆಂಟರ್‌ಗಳಿಗೆ ತಾಲೂಕು ಮತ್ತು ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಸೂಚಿಸಿದರು.


ನಗರದ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿಸಿಪಿಎನ್‌ಡಿಟಿ ಸಭೆಯಲ್ಲಿ ಮಾತನಾಡಿದರು.


ಈ ಕಾಯ್ದೆಯಡಿ ಸ್ಕ್ಯಾನಿಂಗ್ ಕೇಂದ್ರಗಳು ನೈತಿಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂದು ಪರಿಶೀಲಿಸಬೇಕು. ಕಾಯ್ದೆಯನ್ವಯ ಎಲ್ಲ ಸ್ಕ್ಯಾನಿಂಗ್ ಸೆಂಟರ್‌ಗಳು ನೋಂದಣಿಯಾಗಿರಬೇಕು. ನೋಂದಣಿ ಆಗದೆ ಯಾವುದೇ ಸ್ಕ್ಯಾನಿಂಗ್ ಕೇಂದ್ರಗಳು ನಡೆಸುತ್ತಿದ್ದರೆ ಅಥವಾ ನೋಂದಣಿಯಾದ ಕೇಂದ್ರಗಳಲ್ಲೂ ಅನಧಿಕೃತವಾಗಿ ಲಿಂಗ ಪತ್ತೆ ಚಟುವಟಿಕೆ ನಡೆಯುತ್ತಿದ್ದರೆ ಅವುಗಳನ್ನು ಗುರುತಿಸಬೇಕು. ಗೌಪ್ಯವಾಗಿ ಮಾಹಿತಿ ಸಂಗ್ರಹಿಸಿ ವರದಿ ನೀಡಬೇಕು ಎಂದು ಸೂಚಿಸಿದರು.


ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳು ಫಾರ್ಮ್ ಎಫ್ ಅನ್ನು ಕಡ್ಡಾಯವಾಗಿ ನೀಡುವಂತೆ ಹಾಗೂ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.


ಜಿಲ್ಲೆಯಲ್ಲಿ ಒಟ್ಟು ಪಿಸಿಪಿಎನ್‌ಡಿಟಿ 288 ಕೇಂದ್ರಗಳಿದ್ದು, 232 ಕೇಂದ್ರಗಳಿಗೆ ಈಗಾಗಲೇ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. 80 ಕೇಂದ್ರಗಳು ಫಾರ್ಮ್ ಎಫ್ ಒದಗಿಸಿಲ್ಲ. ಈ ಕುರಿತು ಸಂಬಂಧಪಟ್ಟವರಿಗೆ ನೋಟಿಸ್ ನೀಡಲಾಗಿದೆ ಎಂದು ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದರು.


ಇದಕ್ಕೆ ಪ್ರತಿಕ್ರಿಯಿಸಿದ ಡಿಸಿ ಅವರು, ಪ್ರತಿ ಸೆಂಟರ್‌ಗಳು ಕಡ್ಡಾಯವಾಗಿ ಎಫ್ ಫಾರ್ಮ್ ಅನ್ನು ಸಲ್ಲಿಸುವಂತೆ ಮತ್ತು ಸಲ್ಲಿಕೆಯಾದ ಫಾರ್ಮ್‌ಗಳನ್ನು ಕಾಲಕಾಲಕ್ಕೆ ಪರಿಶೀಲಿಸಬೇಕು. ಜಿಲ್ಲಾದ್ಯಂತ ಪ್ರಸ್ತುತ 25 ಕೇಂದ್ರಗಳು ಇತರ ಕಾರಣಗಳಿಂದ ಕೆಲಸ ನಿಲ್ಲಿಸಿದ್ದು, ಈ ಸೆಂಟರ್‌ಗಳಲ್ಲಿರುವ ಯಂತ್ರಗಳ ದುರ್ಬಳಕೆಯಾಗದಂತೆ ಎಚ್ಚರಿಕೆ ವಹಿಸಿ, ಸೀಲ್ ಮಾಡಬೇಕು ಎಂದು ನಿರ್ದೇಶಿಸಿದರು.


ಈಗಾಗಲೇ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಅನುಪಾತ ಕಡಿಮೆಯಾಗಿದ್ದು, ಈ ನಿಟ್ಟಿನಲ್ಲಿ ಅತ್ಯಂತ ಜಾಗರೂಕತೆಯಿಂದ ಕಟ್ಟುನಿಟ್ಟಾಗಿ ಕಾಯ್ದೆಯನ್ವಯ ಕಾರ್ಯ ನಿರ್ವಹಿಸಬೇಕು ಎಂದು ತಿಳಿಸಿದರು.


ಸ್ಕ್ಯಾನಿಂಗ್ ಸಂದರ್ಭದಲ್ಲಿ ಆ ಸ್ಥಳದಲ್ಲಿ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ಹೊರತುಪಡಿಸಿ ಯಾರು ಪ್ರವೇಶಿಸುವಂತಿಲ್ಲ. ಸ್ಥಳದಲ್ಲಿ ಗಡಿಯಾರವನ್ನು ಹೊರತು ಪಡಿಸಿ ಯಾವುದೇ ರೀತಿಯ ಚಿತ್ರಗಳು, ಸಂಕೇತಗಳು ಭಾವಚಿತ್ರಗಳು ಇರುವಂತಿಲ್ಲ. ಪರೋಕ್ಷವಾಗಿ ಮಗುವಿನ ಲಿಂಗವನ್ನು ಸೂಚಿಸುವಂತೆ ಯಾವುದೇ ರೀತಿಯ ಸನ್ನೆ, ಸೂಚನೆ ನೀಡುವಂತಿಲ್ಲ. ಎಲ್ಲ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಲಿಂಗ ಪತ್ತೆ ಮಾಡಲಾಗುವುದಿಲ್ಲ ಎಂದು ಫಲಕ ಅಳವಡಿಸಬೇಕು. ರೇಡಿಯಾಲಜಿಸ್ಟ್‌ಗಳು ಎರಡು ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಮಾತ್ರ ಕಾರ್ಯನಿರ್ವಹಿಸಲು ಕಾಯ್ದೆಯಡಿ ಅವಕಾಶವಿದೆ ಎಂದು ಹೇಳಿದರು.


ಪ್ರತಿಯೊಂದು ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ಕೆಪಿಎಂಇ ಲೈಸೆನ್ಸ್ ನಂಬರ್, ವೈದ್ಯರು ಭೇಟಿ ನೀಡುವ ಸಮಯ, ವೈದ್ಯರು ಹೆಸರು ಎಂಬಿಬಿಎಸ್ ನೋಂದಣಿ ಸಂಖ್ಯೆಯನ್ನು ಕಡ್ಡಾಯವಾಗಿ ನಮೂದಿಸಿರಬೇಕು. ದಿನವೂ ಆ ವೈದ್ಯರೇ ಭೇಟಿ ನೀಡುತ್ತಿದ್ದಾರೆಯೇ ಎಂಬುದನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.


ಇತ್ತೀಚಿಗೆ ನಗರದಲ್ಲಿ ನರದೌರ್ಬಲ್ಯ ಹಾಗೂ ಲೈಂಗಿಕ ಸಮಸ್ಯೆ ಕುರಿತು ಔಷಧ ನೀಡುವ ಟೆಂಟ್ ರೀತಿಯ ಕ್ಲಿನಿಕ್‌ಗಳು ಕಾಣಿಸಿಕೊಳ್ಳುತ್ತಿದ್ದು, ಇವು ನಾಗರಿಕರ ಆರೋಗ್ಯ ಹಾಗೂ ನಗರದ ಸೌಂದರ್ಯವನ್ನು ಹಾಳು ಮಾಡುತ್ತಿವೆ. ಇವುಗಳು ನಿಜವಾಗಿಯೂ ಲೈಸೆನ್ಸ್ ಪಡೆದ ಕ್ಲಿನಿಕ್‌ಗಳೇ ಎಂದು ಪರಿಶೀಲಿಸಿ, ವರದಿ ನೀಡಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.


ಪಿಸಿಪಿಎನ್‌ಡಿಟಿ ಕಾಯ್ದೆಗೆ ಸಂಬಂಧಿಸಿದಂತೆ ಜಿಲ್ಲಾ ಮಟ್ಟದ ಸಮಿತಿಯಲ್ಲಿ ಪೊಲೀಸ್, ಎನ್‌ಜಿಒ, ರೇಡಿಯಾಲಜಿಸ್ಟ್, ಆರೋಗ್ಯ ಅಧಿಕಾರಿಗಳು, ಸೇರಿದಂತೆ ಇತರ ಅಧಿಕಾರಿಗಳಿದ್ದು, ತಾಲೂಕು ಮಟ್ಟದಲ್ಲಿಯೂ ಸಮಿತಿ ರಚಿಸಿ ಪ್ರತಿ ತಿಂಗಳು ಸಭೆ ನಡೆಸಬೇಕು ಎಂದು ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚಿಸಿದರು.


ಸಭೆಯಲ್ಲಿ ಡಿಎಚ್‌ಒ ಡಾ.ಪಿ.ಸಿ ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಬಸವರಾಜು, ವಿವಿಧ ತಾಲೂಕು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಅಧಿಕಾರಿಗಳು ಉಪಸ್ಥಿತರಿದ್ದರು.