ಜಿಲ್ಲೆ

ನಿರಾಶ್ರಿತರ ಸಮಸ್ಯೆ ಆಲಿಸಿದ ಪಲ್ಲವಿ

ಜಗಳೂರು : ಅಂಬೇಡ್ಕರ್ ಅವರ ಆಶಯದಂತೆ ಶಿಕ್ಷಣದಿಂದ ಮಾತ್ರ ಶೋಷಿತ ಅಲೆಮಾರಿ ಸಮುದಾಯಗಳು ಮುನ್ನಲೆಗೆ ಬರಲು ಸಾಧ್ಯ ಎಂದು ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜೆ. ಪಲ್ಲವಿ ಹೇಳಿದರು.

ಜಗಳೂರು ಪಟ್ಟಣದ ಖಾಸಗಿ ಬಸ್ ನಿಲ್ದಾಣಕ್ಕೆ ಶನಿವಾರ ಖಾಸಗಿ ಬಸ್ ನಿಲ್ದಾಣದ ಮಳಿಗೆಗಳಲ್ಲಿ ವಾಸಿಸುತ್ತಿರುವ ನಿರಾಶ್ರಿತ ಕುಟುಂಬಗಳನ್ನು ಭೇಟಿ ನೀಡಿ ಮಾತನಾಡಿದರು.

ಎಸ್‌ಸಿ, ಎಸ್‌ಟಿ ಅಲೆಮಾರಿ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಅಭಿವೃದ್ದಿ ನಿಗಮ ಪೂರಕವಾಗಿ ಕೆಲಸ ಮಾಡುತ್ತಿದೆ. ಪರಿಶಿಷ್ಠ ಸಮುದಾಯಗಳಾದ ಅಲೆಮಾರಿ, ಅರೆ ಅಲೆಮಾರಿ ಸಮುದಾಯದ ಸಾಮಾಜಿಕ, ಆರ್ಥಿಕ ಸ್ಥಿತಿಗತಿಗಳನ್ನು ಪರಿಶೀಲನೆ ನಡೆಸಿ ವರದಿಯನ್ನು ಆಯಾ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಜಂಟಿ ಇಲಾಖೆಗಳ ಸಭೆ ನಡೆಸಿ ಸಮಸ್ಯೆ ಇತ್ಯರ್ಥಪಡಿಸುವ ಪ್ರಯತ್ನ ಮಾಡಲಾಗುವುದು ಎಂದರು.

ಸರ್ಕಾರದ ಆರ್ಥಿಕ ಯೋಜನೆಗಳನ್ನು ಪಾರದರ್ಶಕವಾಗಿ ಸಮರ್ಪಕವಾಗಿ ಅಲೆಮಾರಿ ಸಮುದಾಯಗಳಿಗೆ ತಲುಪಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಡುವ ಹಾಗೂ ನಿವೇಶನ, ಸೂರಿಲ್ಲದವರಿಗೆ ಸೂರು ಕಲ್ಪಿಸಿ, ಟೆಂಟ್ ಮುಕ್ತ ರಾಜ್ಯವನ್ನಾಗಿಸಲು ಸಂಕಲ್ಪ ಮಾಡಲಾಗಿದೆ ಎಂದರು.

2020-21 ನೇ ಸಾಲಿನಲ್ಲಿ ಎಸ್‌ಸಿ,ಎಸ್‌ಟಿ ಅಲೆಮಾರಿ ನಿಗಮದಡಿ ವಸತಿ ಯೋಜನೆಗೆ ಮೀಸಲಾಗಿದ್ದ 500 ಕೋಟಿ ಅನುದಾನ ಬೇರೆಡೆಗೆ ವರ್ಗಾಯಿಸಲಾಗಿತ್ತು. ಆಡಳಿತಾವಧಿಯಲ್ಲಿ ನಿಗಮದಡಿ ಬರುವ 99 ಸಮುದಾಯಗಳಿಗೆ ಸಾಮಾಜಿಕ ನ್ಯಾಯ, ಆರ್ಥಿಕ ಸಬಲೀಕರಣ ಸೇರಿ ಶ್ರೇಯೋಭಿವೃದ್ದಿಗೆ ಪ್ರಾಮಾಣಿಕ ಸೇವೆ ಮಾಡುವೆ ಎಂದು ಭರವಸೆ ನೀಡಿದರು.

ತಹಸೀಲ್ದಾರ್ ಸೈಯದ್ ಕಲೀಂ ಉಲ್ಲಾ ಮಾತನಾಡಿ, ಗ್ರಾಮವು ಸ.ನಂ-1/1 ಜಮೀನಿನಲ್ಲಿ ಒತ್ತುವರಿಗೊಳಿಸಿದ ಸರ್ಕಾರಿ ಜಾಗವನ್ನು ತೆರವುಗೊಳಿಸಿ ಸಮಸ್ಯೆ ಇತ್ಯರ್ಥಗೊಳಿಸಲಾಗುವುದು. ಗ್ರಾಮಕ್ಕೆ ಹಂತಹಂತವಾಗಿ ಮೂಲಸೌಕರ್ಯ ಒದಗಿಸಲು ಗ್ರಾಮಸ್ಥರು ಸಹಕರಿಸಬೇಕು ಎಂದರು.

ಅಭಿವೃದ್ಧ ನಿಗಮದ ಆಪ್ತ ಕಾರ್ಯದರ್ಶಿ ಆನಂದಕುಮಾರ್, ಸಮಾಜಕಲ್ಯಾಣ ಇಲಾಖೆ ಜಂಟಿನಿರ್ದೇಶಕ ನಾಗರಾಜ್, ತಾಪಂ ಇಒ ಕೆಂಚಪ್ಪ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಪರಮೇಶ್ವರಪ್ಪ,ಪ.ವರ್ಗಗಳ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್, ಪಪಂ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಪಪಂ ಸದಸ್ಯ ಶಕೀಲ್ ಅಹಮ್ಮದ್, ಮುಖಂಡ ಲೋಕೇಶ್ ಬಿ.ಆರ್.ಐ. ಧನಂಜಯ್,ಹಿರೇಮಲ್ಲನಹೊಳೆ ಗ್ರಾಪಂ ಅಧ್ಯಕ್ಷ ಶ್ರೀನಿವಾಸ್, ಕೊರಚ ಸಮಾಜದ ಅಧ್ಯಕ್ಷ ರವಿಕುಮಾರ್, ಸಮುದಾಯದ ಮುಖಂಡರಾದ ಕುರಿಜಯ್ಯಣ್ಣ, ಮಾರಪ್ಪ, ವೆಂಕಟೇಶ್, ಚಂದ್ರು, ನಾರಾಯಣಪ್ಪ ಇತರರಿದ್ದರು.

ಅಧಿಕಾರಿಗಳಿಗೆ ತರಾಟೆ : ಅಧಿಕಾರಿಗಳ ನಿರ್ಲಕ್ಷದಿಂದ ಕೆರೆ ಅಂಗಳದ ಜೋಗಪ್ಪನಗುಡಿ ಸುತ್ತಮುತ್ತಲಿನ ಅನೇಕ ಕುಟುಂಬಗಳು ಮನೆಗಳನ್ನು ಕಳೆದುಕೊಂಡು ಹಲವು ವಷರ್ಗಳಿಂದ ಖಾಸಗಿ ಬಸ್ ನಿಲ್ದಾಣದಲ್ಲಿ ವಾಸ ಮಾಡುವಂತಾಗಿದೆ. ಮಲಗಲು ಕೊಠಡಿ, ಸ್ನಾನಗೃಹಗಳಿಲ್ಲದೆ ಮಹಿಳೆಯರು, ಮಕ್ಕಳು ಪ್ರಾಣಿಗಳಂತೆ ಬದುಕುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಏಕೆ ಕ್ರಮ ಕೈಗೊಂಡಿಲ್ಲವೆಂದು ಮುಖ್ಯಾಧಿಕಾರಿ ಲೋಕ್ಯಾನಾಯ್ಕ ಅವರನ್ನು ಪ್ರಶ್ನಿಸಿದರು. ಕೂಡಲೇ ಅಶ್ವತ್‌ರೆಡ್ಡಿ ನಗರದ ಸಮೀಪ 1.20 ಎಕರೆ ಸರ್ಕಾರಿ ಜಮೀನಿನಲ್ಲಿ ನಿರಾಶ್ರಿತ ಕುಟುಂಬಗಳಿಗೆ ನಿವೇಶನ ನಿರ್ಮಿಸಿಕೊಂಡುವಂತೆ ಸೂಚನೆ ನೀಡಿದರು.

ಹುಚ್ಚವ್ವನಹಳ್ಳಿ ಕೊರಚರಹಟ್ಟಿಗೆ ಭೇಟಿ: ರಾಜ್ಯ ಎಸ್‌ಸಿ, ಎಸ್‌ಟಿ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಜೆ. ಪಲ್ಲವಿ ಅಧಿಕಾರಿಗಳ ಜತೆ ತಾಲೂಕಿನ ಹುಚ್ಚವ್ವನಹಳ್ಳೀ ಕೊರಚರಹಟ್ಟಿ ಗ್ರಾಮಕ್ಕೆ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿದರು.

ಗ್ರಾಮದಲ್ಲಿ ರಸ್ತೆ, ಸಾರಿಗೆ, ಶುದ್ಧ ಕುಡಿಯುವ ನೀರು ಸೇರಿ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿ ಅಧ್ಯಕ್ಷೆ ಜೆ.ಪಲ್ಲವಿ ತಿಂಗಳೊಳಗೆ ಸಮಸ್ಯೆಗಳೆಲ್ಲ ಪರಿಹಾರವಾಗಬೇಕು ಎಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು.