ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ನಗರಕ್ಕೆ ಪ್ರವಾಸಿಗರ ದಂಡೇ ಬಂದಿದ್ದು, ಕೇವಲ ಹತ್ತು ದಿನಗಳಲ್ಲಿ ಲಕ್ಷಾಂತರ ಜನರು ಭೇಟಿ ನೀಡಿದ್ದಾರೆ.
ಅರಮನೆಗೆ ಹತ್ತು ದಿನಗಳಲ್ಲಿ ಭೇಟಿ ನೀಡಿದವರ ಸಂಖ್ಯೆ 3 ಲಕ್ಷ ದಾಟಿದ್ದು, ಮೃಗಾಲಯಕ್ಕೆ 1.56 ಲಕ್ಷ ಜನರು ಭೇಟಿ ನೀಡಿದ್ದಾರೆ. ಆದರೆ ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಮೃಗಾಲಯಕ್ಕೆ ಭೇಟಿ ನೀಡಿದವರ ಸಂಖ್ಯೆ 9 ಸಾವಿರ ಕಡಿಮೆಯಾಗಿದೆ. ಕಳೆದ ವರ್ಷ 1.65 ಲಕ್ಷ ಜನ ಭೇಟಿ ನೀಡಿದ್ದರು.
ಅರಮನೆ, ಚಾಮುಂಡಿಬೆಟ್ಟ, ಕೆ.ಆರ್.ಎಸ್ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಭೇಟಿ ನೀಡುತ್ತಿರುವುದರಿಂದ ಮೃಗಾಲಯಕ್ಕೆ ಭೇಟಿ ನೀಡುವವರ ಸಂಖ್ಯೆ ಈ ಬಾರಿ ಕಡಿಮೆಯಾಗಿದೆ.
ಈ ಬಾರಿ ಹನ್ನೊಂದು ದಿನ ನವರಾತ್ರಿ ಬಂದಿದ್ದರೂ ಕೂಡ ಪ್ರವಾಸಿಗರ ಸಂಖ್ಯೆ ಮಾತ್ರ ಕಡಿಮೆಯಾಗಿದ್ದು, 1.56 ಲಕ್ಷ ಜನರ ಭೇಟಿಯಿಂದ ಮೃಗಾಲಯಕ್ಕೆ ಒಟ್ಟು 191.37 ಲಕ್ಷ ರೂ. ಸಂಗ್ರಹವಾಗಿದೆ.
ಆಯುಧ ಪೂಜೆಯ ದಿನವೇ ಹೆಚ್ಚು ಅಂದರೆ 27,033 ಜನ ಮತ್ತು ವಿಜಯದಶಮಿಯ ದಿನ 27,272 ಜನ ಭೇಟಿ ನೀಡಿದ್ದರು. ಇದರಿಂದ ಕ್ರಮವಾಗಿ 33.21 ಲಕ್ಷ ಮತ್ತು 34.07 ಲಕ್ಷ ರೂ. ಆದಾಯ ಸಂಗ್ರಹವಾಗಿದೆ.
ಕಳೆದ ವರ್ಷ ಆಯುಧಪೂಜೆಯ ದಿನ 21,936 ಜನ, ವಿಜಯದಶಮಿಯ ದಿನ 34,559 ಜನರು ಭೇಟಿ ನೀಡಿದ್ದರು.