ಜಿಲ್ಲೆ

ನವೀಕೃತ ಮಾರುಕಟ್ಟೆ, ಆಸ್ಪತ್ರೆಗೆ ಶಾಸಕ ಅಬ್ಬಯ್ಯ ಭೇಟಿ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಹುಬ್ಬಳ್ಳಿಯ ನವೀಕೃತ ಜನತಾ ಬಜಾರ್ ಮಾರುಕಟ್ಟೆ, ಹೊಸ ಮೇದಾರ ಓಣಿಯ ಸಾರ್ವಜನಿಕ ಆಸ್ಪತ್ರೆ ಮತ್ತು ನಿರ್ಮಾಣ ಹಂತದಲ್ಲಿರುವ ಹಳೇ ಹುಬ್ಬಳ್ಳಿ ಹೈಟೆಕ್ ಆಸ್ಪತ್ರೆಗೆ ಶಾಸಕ ಪ್ರಸಾದ ಅಬ್ಬಯ್ಯ ಸೋಮವಾರ ಭೇಟಿ ನೀಡಿ, ಅಧಿಕಾರಿಗಳಿಗೆ ಅಗತ್ಯ ಸೂಚನೆ ನೀಡಿದರು.

ಜನತಾ ಬಜಾರ್ ಮಾರುಕಟ್ಟೆಯಲ್ಲಿನ ಮಳೆಗೆಗಳನ್ನು ವೀಕ್ಷಣೆ ಮಾಡಿದ ಶಾಸಕ ಅಬ್ಬಯ್ಯ, ಹಿಂದೆ ಇದ್ದ ಮಳಿಗೆಗಳು ಮತ್ತು ವ್ಯಾಪಾರಸ್ಥರ ಕಟ್ಟೆಗಳ ಸಂಖ್ಯೆಯಲ್ಲಿ ವ್ಯತ್ಯಾಸವಿದ್ದು, ಕಟ್ಟಾಗಳ ಕೊರತೆ ನೀಗಿಸಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಶೀಘ್ರ ಮಳಿಗೆಗಳನ್ನು ಹಸ್ತಾಂತರಿಸಿ ರಸ್ತೆ ಬದಿ ಇರುವ ವ್ಯಾಪಾರಸ್ಥರನ್ನು ಮಾರುಕಟ್ಟೆಗೆ ಸ್ಥಳಾಂತರ ಮಾಡಬೇಕು. ಸ್ಮಾರ್ಟ್​ಸಿಟಿಯಿಂದ ಪಾಲಿಕೆ ಅಧೀನಕ್ಕೆ ಪಡೆದುಕೊಂಡು, ಮಳಿಗೆ ಹಂಚಿಕೆ ಪ್ರಕ್ರಿಯೆಗೆ ಮುಂದಾಗಬೇಕು ಎಂದು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.

ಮೇದಾರ ಓಣಿ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕರು, ಬಡ ರೋಗಿಗಳ ಅನುಕೂಲಕ್ಕಾಗಿ ಇಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲು ನಿರ್ಧರಿಸಲಾಗಿದೆ. ಪಾಲಿಕೆ ಆರೋಗ್ಯ ಇಲಾಖೆ ಡಯಾಲಿಸಿಸ್ ಕೇಂದ್ರಕ್ಕೆ ಅವಶ್ಯವಿರುವ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಹುಬ್ಬಳ್ಳಿ ಕಿಮ್ಸ್​ನಲ್ಲಿ ಡಯಾಲಿಸಿಸ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ನಿರ್ವಹಣೆ ಕಷ್ಟಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಈ ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪನೆಯಿಂದ ಬಡ ರೋಗಿಗಳಿಗೆ ಸಾಕಷ್ಟು ಅನುಕೂಲ ಆಗಲಿದೆ. ಹೀಗಾಗಿ ಸರ್ಕಾರದಿಂದ ಅಗತ್ಯ ಸೌಲಭಗಳನ್ನು ಒದಗಿಸಲಾಗುವುದು ಎಂದು ಪಾಲಿಕೆ ಆರೋಗ್ಯಧಿಕಾರಿ ಡಾ. ಶ್ರೀಧರ ದಂಡಪ್ಪನವರಗೆ ತಿಳಿಸಿದರು.

ಡಿಸೆಂಬರ್ ಒಳಗೆ ಕಾಮಗಾರಿ ಪೂರ್ಣಗೊಳಿಸಿ : ಹಳೆ ಹುಬ್ಬಳ್ಳಿಯಲ್ಲಿ ನಿರ್ವಿುಸಲಾಗುತ್ತಿರುವ 100 ಹಾಸಿಗೆಯ ಹೈಟೆಕ್ ಆಸ್ಪತ್ರೆಗೆ ಭೇಟಿ ನೀಡಿದ ಶಾಸಕ ಅಬ್ಬಯ್ಯ, ಕಾಮಗಾರಿಯನ್ನು ಶೀಘ್ರ ಸಂಪನ್ನಗೊಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದರು.

ಪಾಲಿಕೆ ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರ್, ಪಾಲಿಕೆ ಮಾರುಕಟ್ಟೆ ವಿಭಾಗದ ಅದಿಕಾರಿಗಳು, ವಲಯ ಆಯುಕ್ತರು, ಗುತ್ತಿಗೆದಾರರು ಹಾಗೂ ಇತರರು ಇದ್ದರು.