lokayukta Visit and check the firework disaster site 
ಜಿಲ್ಲೆ

ಪಟಾಕಿ ದುರಂತ ದಾರುಣ ಘಟನೆ

ಶಿವರಾಜ.ಎಂ

ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಕಳವಳ

ವಿಜಯವಾಣಿ ಸುದ್ದಿಜಾಲ ಆನೇಕಲ್
ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ದಾರುಣ ಘಟನೆಯಾಗಿದ್ದು, 15 ಮಂದಿ ಮೃತಪಟ್ಟಿರುವುದು ಕುಟುಂಬಗಳಿಗೆ ತುಂಬಲಾರದ ನಷ್ಟ ಎಂದು ಲೋಕಾಯುಕ್ತ ಮುಖ್ಯ ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ಅಭಿಪ್ರಾಯಪಟ್ಟರು.
ಅತ್ತಿಬೆಲೆಯಲ್ಲಿ ಸಂಭವಿಸಿದ ಪಟಾಕಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮಾತನಾಡಿದರು. ಅಧಿಕಾರಿಗಳು ಪಟಾಕಿ ಅಂಗಡಿಗಳಿಗೆ ಅನಿರೀಕ್ಷಿತವಾಗಿ ಭೇಟಿ ನೀಡಿ ಪರಿಶೀಲಿಸಬೇಕು. ಮಾಹಿತಿ ನೀಡಿ ಭೇಟಿ ನೀಡುವುದರಿಂದ ಉಪಯೋಗವಿಲ್ಲ. ನಿಯಮ ಪಾಲಿಸದಿರುವುದು ಕಂಡು ಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದ ಅವರು, ಅನಧಿಕೃತ ಪಟಾಕಿ ಮಳಿಗೆ, ಗೋದಾಮಿನ ಬಗ್ಗೆ ಸಂಪೂರ್ಣ ತನಿಖೆ ಮಾಡುವಂತೆ ಸೂಚಿಸಲಾಗಿದೆ ಎಂದರು.
ನಿಯಮದಂತೆ ಮಳಿಗೆ ನಿರ್ಮಿಸಿಲ್ಲ. ಅಧಿಕಾರಿಗಳು ಸ್ಥಳ ಪರಿಶೀಲಿಸಿ ಅನುಮತಿ ನೀಡದಿದ್ದರೆ ಇಂತಹ ಅನಾಹುತ ಸಂಭವಿಸುತ್ತಿರಲಿಲ್ಲ ಎಂದ ಅವರು, ಕರ್ತವ್ಯಲೋಪಕ್ಕೆ ಕಾರಣವಾದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಅಕ್ರಮ ಮಳಿಗೆಗಳು ಹಾಗೂ ಅನಾಹುತಗಳ ಸಂದರ್ಭದಲ್ಲಿ ಸಾರ್ವಜನಿಕರು ಎಚ್ಚೆತ್ತು ಕೊಳ್ಳಬೇಕು. ಪಟಾಕಿ ಮಳಿಗೆಯಲ್ಲಿ ಅಕ್ರಮವಾಗಿ ಗೋದಾಮು ಮಾಡಿಕೊಂಡಿರುವುದು ಅಕ್ಕಪಕ್ಕದವರಿಗೆ ಗೊತ್ತಿದ್ದರೂ ಯಾರಿಗೂ ದೂರು ನೀಡದಿರುವುದು ಸರಿಯಲ್ಲ ಎಂದರು.
ಜಿಲ್ಲಾಧಿಕಾರಿ ದಯಾನಂದ್ ಮಾತನಾಡಿ, ಜಿಲ್ಲೆಯ ಎಲ್ಲ ಪಟಾಕಿ ಅಂಗಡಿ ಮತ್ತು ಗೋದಾಮನ್ನು ಕಂದಾಯ, ಪೊಲೀಸ್ ಮತ್ತು ಸ್ಥಳೀಯ ಸಂಸ್ಥೆಗಳ ಸಹಯೋಗದಲ್ಲಿ ಪರಿಶೀಲನೆ ಮಾಡಿ ದಾಖಲಾತಿ ಗಮನಿಸಲು ಮತ್ತು ನಿಯಮಗಳ ಪಾಲನೆ ಬಗ್ಗೆ ಪರಿಶೀಲಿಸಲು ತಂಡ ರಚಿಸಲಾಗಿದೆ. ತಂಡ ಎರಡು ದಿನಗಳಿಂದಲೂ ಕಾರ್ಯನಿರ್ವಹಿಸುತ್ತಿದೆ ಎಂದರು.

ಅಧಿಕಾರಿಗಳ ವಿರುದ್ಧ ಕಿಡಿ ಐದು ವರ್ಷದ ಹಿಂದೆ ಪಟಾಕಿ ಮಳಿಗೆ ಮಾಡಿದ್ದಾರೆ. ಆದರೆ ಇಲ್ಲಿನ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ಇರಲಿಲ್ಲ ಎನ್ನುವುದನ್ನು ನೋಡಿದರೆ ಬೇಜವಾಬ್ದಾರಿ ಎಷ್ಟಿದೆ ಎನ್ನುವುದು ಅರ್ಥ ಆಗುತ್ತದೆ ಎಂದು ಅಧಿಕಾರಿಗಳ ವಿರುದ್ಧ ಕಿಡಿ ಕಾರಿದ ಬಿ.ಎಸ್.ಪಾಟೀಲ್, ಪಟಾಕಿ ಅಂಗಡಿಗಳಲ್ಲಿ ಎಷ್ಟು ಜನ ಕೆಲಸ ಮಾಡುತ್ತಿದ್ದಾರೆ. ಯಾವ ಕೆಲಸ ಮಾಡುತ್ತಿದ್ದರು, ವಯಸ್ಕರೇ ಎನ್ನುವ ಮಾಹಿತಿಯನ್ನು ಏಕೆ ತೆಗೆದುಕೊಂಡಿಲ್ಲ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.