ಕುಶಾಲನಗರ:
ಕುಶಾಲನಗರ ತಾಲೂಕು ವ್ಯಾಪ್ತಿಯ ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು ಮತ್ತು ಸಂಘದ ಕಾರ್ಯವ್ಯಾಪ್ತಿಯ ಗ್ರಾಮಗಳ ಸದಸ್ಯರು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಜಕ್ಕಗೀರಿ ಗ್ರಾಮದ ರಾಷ್ಟ್ರೀಯ ಕೃಷಿ ಪ್ರಶಸ್ತಿ ಪಡೆದ ಪ್ರಗತಿಪರ ರೈತ ವಿಜಯೇಂದ್ರ ಭಟ್ ಅವರ ತೋಟಕ್ಕೆ ಇತ್ತೀಚೆಗೆ ಭೇಟಿ ನೀಡಿದ್ದರು.
ಕೂಡಿಗೆಯ ರಾಮೇಶ್ವರ ಕೂಡುಮಂಗಳೂರು ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ. ಹೇಮಂತ್ ಕುಮಾರ್ ನೇತೃತ್ವದಲ್ಲಿ ರೈತರು ವಿಜಯೇಂದ್ರ ಭಟ್ ಅವರ ನೈಸರ್ಗಿಕ ಸಾವಯವ ಗೊಬ್ಬರ, ರಾಸಾಯನಿಕ ಮುಕ್ತ ಕೃಷಿ, ಅಡಿಕೆ, ಕಾಫಿ, ಏಲಕ್ಕಿ, ಲವಂಗ, ಜಾಯಿಕಾಯಿ, ಮಾವು, ಕಿತ್ತಳೆ, ಸೀಬೆ , ನಿಂಬೆ, ಸೇರಿದಂತೆ 30. ತಳಿಯ ತೋಟಗಾರಿಕಾ ಬೆಳೆಗಳು, ವಿವಿಧ ಹೈಬ್ರೀಡ್ ತಳಿಯ ಹೂ ಗಿಡಗಳ ಬೆಳೆಯುವಿಕೆ, ಅನೇಕ ಉಪ ವಿಭಾಗದಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆದ ಬಗ್ಗೆ ಮಾಹಿತಿ ಪಡೆದುಕೊಂಡರು.
6 ಎಕರೆ ಪ್ರದೇಶದ ಭೂಮಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಸಾವಯುವ ಗೊಬ್ಬರದಿಂದ ಉತ್ತಮ ಗುಣಮಟ್ಟದ ಬೆಳೆಯನ್ನು ಬೆಳೆಯಲು ಅನುಸರಿಸಬಹುದಾದ ಕೃಷಿ ವಿಷಯಗಳ ಬಗ್ಗೆ ವಿಜಯೇಂದ್ರ ಭಟ್ ಮಾಹಿತಿ ನೀಡಿದರು. ವಿಜಯೇಂದ್ರ ಭಟ್ ಅವರ ತೋಟದಲ್ಲಿ ಕೃಷಿ ವಿದ್ಯಾರ್ಥಿಗಳು ವಿಜ್ಞಾನಿಗಳೊಂದಿಗೆ ತೋಟಕ್ಕೆ ಭೇಟಿ ನೀಡಿ ಪ್ರಾಯೋಗಿಕ ಅನುಭವ ಪಡೆದುಕೊಳ್ಳುವುದು ಇದೇ ವೇಳೆ ಕಂಡು ಬಂದಿತು.
ಸಹಕಾರ ಸಂಘದ ಉಪಾಧ್ಯಕ್ಷ ಕೆ.ವಿ. ಬಸಪ್ಪ, ಬಸವನಹಳ್ಳಿ ಲ್ಯಾಂಪ್ಸ್ ಸಹಕಾರ ಸಂಘದ ಅಧ್ಯಕ್ಷ ಎಸ್. ಆರ್. ಅರುಣ್ ರಾವ್, ಸಂಘದ ನಿರ್ದೆಶಕರಾದ ಕೆ.ಪಿ. ರಾಜು, ರಾಮಚಂದ್ರ, ಎಸ್.ಎಸ್. ಕೃಷ್ಣ, ನಾಗರಾಜು, ಕೃಷ್ಣಗೌಡ, ಜಯಶ್ರೀ, ರಮೇಶ್, ಕುಮಾರ್ ಪ್ರಗತಿಪರ ರೈತರಾದ ಕೆ.ವಿ. ಸಣ್ಣಪ್ಪ, ನಾಗರಾಜು ಶಶಿಕುಮಾರ್ ಮತ್ತಿತರರು ಇದ್ದರು.