ಜಿಲ್ಲೆ

ಯಾವುದೇ ಜಾತಿಗೆ ಸೀಮಿತವಾಗದಿದ್ದ ವಿಶ್ವೇಶತೀರ್ಥಶ್ರೀ

ಮೈಸೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಯಾವುದೇ ಜಾತಿಗೆ ಸೀಮಿತವಾಗದೆ ಎಲ್ಲ ವರ್ಗದ ಜನರ ಪ್ರೀತಿಗೆ ಪಾತ್ರರಾಗಿದ್ದವರು ಎಂದು ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ ಬಣ್ಣಿಸಿದರು.

ನಗರದ ಕೃಷ್ಣಮೂರ್ತಿಪುರಂನ ಶಾರದಾ ನೆಲೆಯಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಸೇರಿದಂತೆ ಇನ್ನಿತರ ಸಂಘಟನೆಗಳಿಂದ ಸೋಮವಾರ ಆಯೋಜಿಸಿದ್ದ ಪೇಜಾವರ ವಿಶ್ವೇಶತೀರ್ಥಶ್ರೀಗಳ 5ನೇ ವರ್ಷದ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಸ್ವಾಮೀಜಿಗಳನ್ನು ಜಾತಿಗೆ ಸೀಮಿತಗೊಳಿಸಲಾಗುತ್ತಿದೆ. ಅವರ ಸಮಾಜಸೇವೆಯನ್ನು ಗುರುತಿಸುವ ಕೆಲಸ ಆಗುತ್ತಿಲ್ಲ ಎಂದರು.

ಯತಿಗಳು ಸಾಮರಸ್ಯ ನಡಿಗೆ ಮೂಲಕ ಸಮಾಜದ ಒಗ್ಗಟ್ಟಿಗೆ ಶ್ರಮಿಸುವ ಕೆಲಸವನ್ನು ಮಾಡುವ ಜತೆಗೆ ಪ್ರಕೃತಿ ವಿಕೋಪ, ಸಂಕಷ್ಟ ಸಂದರ್ಭದಲ್ಲಿ ಸೇವೆಗೆ ಸದಾ ಸಿದ್ಧರಾಗಿ ಪಾದಯಾತ್ರೆ ನಡೆಸಿ ಜನರ ಬದುಕಿಗೆ ಚೈತನ್ಯ ತುಂಬುವ ಕೆಲಸ ಮಾಡುತ್ತಿದ್ದರು. ಯಾವುದೇ ಸಮಸ್ಯೆ ಎದುರಾದರೂ ಅದಕ್ಕೆ ಸೂಕ್ತ ಪರಿಹಾರ ಕೊಡುವ ಶಕ್ತಿ ಹೊಂದಿದ್ದರು ಎಂದು ಹೇಳಿದರು.

ನಗರಪಾಲಿಕೆ ಮಾಜಿ ಸದಸ್ಯ ಮಾ.ವಿ.ರಾಮ್ಪ್ರಸಾದ್, ಡಾ.ಬಿ.ಎಸ್.ಪ್ರೇಮಕುಮಾರಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ವಕೀಲ ಪಿ.ಜೆ. ರಾಘವೇಂದ್ರ, ನಿರೂಪಕ ಅಜಯ್ ಶಾಸ್ತ್ರಿ, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ್, ನಿಲಯಪಾಲಕಿ ರೇವತಿ, ಮುಖಂಡರಾದ ಸುಚಿಂದ್ರ, ಮಿರ್ಲೆ ಫಣೀಶ್, ವೀರಭದ್ರಸ್ವಾಮಿ, ಮಹದೇವ್, ಶ್ರೀಧರ್, ಮಹೇಶ್, ರಾಜೇಶ್ ಕುಮಾರ್, ನವನೀತ್‌ಕುಮಾರ್, ಜಯಮ್ಮ, ಎಸ್.ಪಿ.ಅಕ್ಷಯ್, ಹರ್ಷಿತ್ ಎಸ್.ನಾಗೇಶ್ ಇತರರು ಹಾಜರಿದ್ದರು.