ಹುಬ್ಬಳ್ಳಿ: ವಿಶ್ವೇಶಭಾರತ ಪ್ರತಿಷ್ಠಾನ ಮತ್ತು ವಾದಿರಾಜ ಸೇವಾ ಪ್ರತಿಷ್ಠಾನದ ಆಶ್ರಯದಲ್ಲಿ ಅಖಿಲ ಭಾರತ ಮಾಧ್ವ ಮಹಾಮಂಡಳದ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿ ವೃಂದದಿಂದ ನಗರದ ಸವಾಯಿ ಗಂಧರ್ವ ಸಭಾಂಗಣದಲ್ಲಿ ಶನಿವಾರ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ 4ನೆಯ ಆರಾಧನಾ ಮಹೋತ್ಸವ ನಿಮಿತ್ತ ವಿಶ್ವೇಶ ನಮನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅನಂತ ಕುಲಕರ್ಣಿ ಅವರ ದಾಸರ ಪದಗಳು ರಂಜಿಸಿದವು. ಗಾಯನಕ್ಕೆ ಭಕ್ತಿ ಪರವಶರಾದರು.
ವಿಶ್ವ ಹಿಂದೂ ಪರಿಷತ್ನ ಜಯತೀರ್ಥ ಕಟ್ಟಿ ಮಾತನಾಡಿ, ನಮ್ಮ ಸಮಾಜದಲ್ಲಿ ಧರ್ಮಪೀಠಕ್ಕೆ ಹೊಸಮುಖವನ್ನು ಕೊಟ್ಟ ಮೊದಲ ಯತಿ ಶ್ರೀ ವಿಶ್ವೇಶ ತೀರ್ಥರು. ದೀನ ಸೇವೆ ಸಾಧಕನಿಗೆ ಅನಿವಾರ್ಯ ಕರ್ತವ್ಯ ಎಂಬ ಶ್ರೀ ಮಧ್ವಾಚಾರ್ಯರ ಸಂದೇಶವನ್ನು ಕಾರ್ಯರೂಪಕ್ಕೆ ತಂದವರು ಅವರು. ತತ್ವಜ್ಞಾನ ವೈಯಕ್ತಿಕ ಸಾಧನೆಗಷ್ಟೇ ಮೀಸಲಾಗದೆ, ಸಾಮಾಜಿಕ ಹಿತಕ್ಕೂ ಪೂರಕವಾಗಬೇಕೆಂಬ ವಿಶಾಲ ದೃಷ್ಟಿ ಅವರದು. ಪ್ರಾಣಿದಯೆ, ಕರ್ತವ್ಯ, ತೃಪ್ತಿ, ಭಗವತ್ಪ್ರಜ್ಞೆ, ಸದಾಚಾರ ಈ ಪಂಚ ಸೂತ್ರಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರಬೇಕೆಂಬುದು ಅವರ ಜೀವನದ ಧ್ಯೇಯವಾಗಿತ್ತು ಎಂದು ಹೇಳಿದರು.
ವಿಪ್ರರು ಸೇರಿದಂತೆ ಹಿಂದುಗಳು ಒಗ್ಗಟ್ಟಾಗಿ ದೇಶದ ಹಿತಕ್ಕಾಗಿ ಕಾರ್ಯನಿರ್ವಹಿಸಬೇಕು ಎಂದರು. ಎ. ಪಿ. ಐತಾಳ, ಲಿಂಗರಾಜ ಪಾಟೀಲ, ಮದನ ಕುಲಕರ್ಣಿ, ಗೋಪಾಲ ಕುಲಕರ್ಣಿ, ಶ್ರೀನಿವಾಸ ಕಬ್ಬೂರು, ಇತರರು ಇದ್ದರು.