ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಕಾಗಿಲೆನೆಲೆ ಶ್ರೀ ಕನಕಗುರುಪೀಠದ ಮಠಾಧಿಪತಿ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಬೀದಿಗೆ ಇಳಿದರೆ ಶ್ರೀಗಳ ತಲೆದಂಡ ಮಾಡಬೇಕಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ.
ಸಿದ್ದರಾಮಯ್ಯಗೂ ಕಾಗಿನೆಲೆ ಮಠಕ್ಕೂ ಸಂಬಂಧವೇ ಇಲ್ಲ. ಸಿದ್ದರಾಮಯ್ಯ ಅವರೇನು ಮಠ ಕಟ್ಟಿದವರಲ್ಲ. ಮಠ ಕಟ್ಟುವ ಸಂದರ್ಭ ವಿರೋಧ ಇತ್ತು. ವಿರೋಧದ ನಡುವೆ ಮಠ ಕಟ್ಟಿದೆ. ಮಠದ ನಿರ್ಮಾತೃ ನಾನು, ಪ್ರಥಮ ಪೀಠಾಧ್ಯಕ್ಷನೇ ನಾನು. ಆ ಸಂದರ್ಭ ಯಾವ ಸಿದ್ದರಾಮಯ್ಯನೂ ಅಂದು ಇರಲಿಲ್ಲ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.
ಶ್ರೀಗಳು ಬೇಕಾದರೆ ಸಿದ್ದರಾಮಯ್ಯ ಮನೆಗೆ ಹೋಗಿ ಆಶೀರ್ವಾದ ಮಾಡಿ ಅಥವಾ ಮಠದಲ್ಲಿ ಆಶೀರ್ವಾದ ಮಾಡಿ. ಆದರೆ, ಬೀದಿಗೆ ಬಂದರೆ ಬೇರೆ ತರ ಆಗುತ್ತದೆ. ಸಿದ್ದರಾಮಯ್ಯ ಅವರ ಕಾಲಾಳಲ್ಲ ನೀವು, ಕಾಂಗ್ರೆಸ್ ಪಕ್ಷದ ಜೀತದಾಳುಗಳಲ್ಲ ನೀವು, ಕುರುಬ ಸಮುದಾಯದ ಪೀಠಾಧಿಪತಿ ಎಂಬ ಎಚ್ಚರ ಇರಲಿ ಎಂದು ಗುಡುಗಿದರು.
ಸಿದ್ದರಾಮಯ್ಯ ಪರ ಮಾತನಾಡುವುದು, ಜನರನ್ನು ಎತ್ತಿಕಟ್ಟುವ ಕಾರ್ಯ ಮಾಡಬೇಡಿ. ಬೇರೆ ಪೀಠಗಳನ್ನು ಮಾರ್ಗದರ್ಶನವಾಗಿ ಇಟ್ಟುಕೊಂಡು ಬದುಕಿ. ಇಲ್ಲವಾದಲ್ಲಿ ನಿಮ್ಮ ತಲೆದಂಡ ಮಾಡಬೇಕಾಗುತ್ತದೆ. ಇದು ಸಮಾಜದ ಪೀಠ. ಈ ಪೀಠಕ್ಕೂ ಸಿದ್ದರಾಮಯ್ಯಗೂ ಸಂಬಂಧವಿಲ್ಲ, ಅವನು ಕಟ್ಟಿದವನೂ ಅಲ್ಲ. ಮಠ ಕಟ್ಟಿದ ನಂತರ ಮಠಕ್ಕೆ ಬಂದರು. ತಮ್ಮ ರಾಜಕೀಯ ಉಳಿವಿಗೋಸ್ಕರ ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಬಳಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುವ ಪರಿಸ್ಥಿತಿಯಲ್ಲಿ ಇದ್ದಾರೆ. ಸಂಕಷ್ಟದಿಂದ ಪಾರಾಗಲು ಸಿದ್ದರಾಮಯ್ಯ ಕುರುಬ ಸಮುದಾಯವನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಕುರುಬರಿಗೆ ಸಿದ್ದರಾಮಯ್ಯ ಶಿಕ್ಷಣವನ್ನೂ ಸಹ ನೀಡಲಿಲ್ಲ. ಕುರುಬ ಸಮುದಾಯಕೋಸ್ಕರ ಸಿದ್ದರಾಮಯ್ಯ ಒಂದು ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜನ್ನು ಸಹ ಪ್ರಾರಂಭ ಮಾಡಲಿಲ್ಲ. ಅವರ ಜತೆಗೆ ಎಸ್ಸೆಸ್ಸೆಲ್ಸಿ ಫೇಲ್ ಆದವರೇ ಇರುವುದು ಎಂದು ಟೀಕಿಸಿದರು.
ಹಲವು ವರ್ಷಗಳಿಂದ ಕುರುಬರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬಗ್ಗೆ ಯಾವುದೇ ಚರ್ಚೆ, ಸಭೆಗಳನ್ನು ನಡೆಸಲು ಸಿದ್ದರಾಮಯ್ಯ ಮುಂದಾಗಿರಲಿಲ್ಲ. ಈ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚೆಯೇ ನಡೆಸಲಿಲ್ಲ. ಈಗ ಏಕಾಏಕೀ ಸಭೆ ಮಾಡುತ್ತಿರುವುದರ ಹಿಂದೆ ಕುರುಬರನ್ನು ಹಿಡಿದುಕೊಳ್ಳುವ ಪ್ರಯತ್ನವಾಗಿದೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದಾಗ ನಾವೆಲ್ಲರೂ ಸೇರಿ ಕುರುಬರನ್ನು ಎಸ್‌ಟಿಗೆ ಸೇರಿಸಬೇಕೆಂದು ಒತ್ತಡ ಹೇರಿದಾಗ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಆದೇಶ ನೀಡಿದ್ದರು. ನಂತರ, ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಾಧ್ಯವಾಗಲಿಲ್ಲ. ನಂತರ, ಮುಖ್ಯಮಂತ್ರಿಯಾಗಿ ಬಂದ ಸಿದ್ದರಾಮಯ್ಯ ಈ ಬಗ್ಗೆ ಗಮನಹರಿಸಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ವಿಚಾರವಾಗಿ ಕಾಗಿನೆಲೆಯಿಂದ ಬೆಂಗಳೂರಿನ ತನಕ ಪಾದಯಾತ್ರೆ ಮಾಡಿದೆವು. ಆ ಸಂದರ್ಭ ಸಿದ್ದರಾಮಯ್ಯ ‘ಪಾದಯಾತ್ರೆ ಬೇಕಿತ್ತಾ’ ಎಂದು ಪ್ರಶ್ನಿಸಿದ್ದರು. ನಂತರ ರಾಜ್ಯದಿಂದ ಎಸ್‌ಟಿಗೆ ಸೇರಿಸುವಂತೆ ಮಾಡುವ ಶಿಫಾರಸನ್ನು ರಿಜಿಸ್ಟ್ರಾರ್ ಜನರಲ್ ಆಫ್ ಇಂಡಿಯಾಗೆ ಕಳುಹಿಸುವ ಬದಲಿಗೆ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯಕ್ಕೆ ಕಳುಹಿಸಿ ಸುಮ್ಮನಾದರು. ಈಗ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಒತ್ತಡ ಬಂದಿರುವುದರಿಂದ ಕುರುಬರನ್ನು ಬನ್ನಿ, ಬನ್ನಿ ಎನ್ನುತ್ತಿದ್ದಾರೆ. ತಮ್ಮ ಕುರ್ಚಿಗೆ ಕಂಟಕ ಬಂದಾಗಲೆಲ್ಲ ಕುರುಬರನ್ನು ಮೆಚ್ಚಿಸಿಕೊಂಡು ಹೋರಾಟ ಮಾಡಲು ಬೇರೆಯವರ ಮೇಲೆ ಎತ್ತಿಕಟ್ಟುವ ಕೆಲಸ ಮಾಡುತ್ತಾರೆ. ಈಗಲೂ ಅದೇ ಕೆಲಸಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ನನ್ನಾದಿಯಾಗಿ ಎಲ್ಲ ಕುರುಬ ನಾಯಕರನ್ನು ಸಿದ್ದರಾಮಯ್ಯ ತುಳಿದರೇ ಹೊರತು ಬೆಳೆಸುವ ಕೆಲಸ ಮಾಡಲಿಲ್ಲ. ಮಾತೆತ್ತಿದರೆ ಹೋರಾಟದ ಮೂಲಕ ರಾಜಕಾರಣಕ್ಕೆ ಬಂದೆ ಎನ್ನುವ ಸಿದ್ದರಾಮಯ್ಯ ಯಾವ ಹೋರಾಟದಲ್ಲಿ ಭಾಗಿಯಾಗಿದ್ದರು? ವಿದ್ಯಾರ್ಥಿ, ರೈತ,ದಲಿತ ಚಳವಳಿಗಳಲ್ಲಿ ಭಾಗಿಯಾಗಿಲ್ಲ. ಇಂದು ಏನಾದರೂ ಕುರುಬರ ಮಕ್ಕಳು ಐಎಎಸ್, ಐಪಿಎಸ್, ಕೆಎಎಸ್, ಡಿವೈಎಸ್‌ಪಿ ಹುದ್ದೆಗಳನ್ನು ಅಲಂಕರಿಸಿದ್ದರೆ ಡಿ.ದೇವರಾಜ ಅರಸು ಕಾರಣ ಎಂದು ಹೇಳಿದರು.
ವಿಧಾನ ಪರಿಷತ್‌ಗೆ ನಾಲ್ಕು ನಾಮ ನಿರ್ದೇಶಿತ ಸದಸ್ಯ ಸ್ಥಾನಗಳಿಗೆ ನೇಮಕ ಮಾಡುವಾಗ ಹಿಂದುಳಿದ ವರ್ಗಗಳ ಮುಖಂಡರು ಕಾಣಿಸಲಿಲ್ಲವೇ? ಇಬ್ಬರು ಬಲಗೈ, ಒಬ್ಬರು ಬಣಜಿಗ, ಒಬ್ಬರು ಒಕ್ಕಲಿಗರನ್ನು ನೇಮಿಸಿರುವ ನಿಮಗೆ ಹಿಂದುಳಿದ ವರ್ಗಕ್ಕೆ ಸೇರಿದ ಒಬ್ಬರು ಸಿಗಲಿಲ್ಲವೇ? ನಿಮ್ಮ ಮಗನನ್ನು ಬಿಟ್ಟರೆ ಬೇರೆ ಯಾರು ಕಾಣುವುದಿಲ್ಲವೇ ಎಂದು ಪ್ರಶ್ನಿಸಿದರು.
ಹತ್ತು ವರ್ಷಗಳ ನಂತರ ಉಳ್ಳವರು ಇಲ್ಲದವರಿಗೆ ಮೀಸಲಾತಿ ಬಿಟ್ಟು ಕೊಡಬೇಕು ಎಂದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರೇ ಹೇಳಿದ್ದಾರೆ. ಕರ್ನಾಟಕ ಸೇರಿದಂತೆ ದೇಶದಲ್ಲಿ ಉಳ್ಳವರು ಹಾಗೂ ಮೀಸಲಾತಿ ಮೂಲಕ ಮೇಲಕ್ಕೆ ಬಂದವರು ಮೀಸಲಾತಿ ಬಿಟ್ಟು ಕೊಡಬೇಕು. ನಾನು ಮೀಸಲಾತಿ ಕ್ಷೇತ್ರದಿಂದ ಸ್ಪರ್ಧಿಸಿದ್ದರೆ ಬಿಟ್ಟು ಕೊಡುತ್ತಿದ್ದೆ. ಮೀಲಾತಿ ಪ್ರಯೋಜನ ಪಡೆದವರು ಮುಂದೆ ಬೇರೆಯವರಿಗೆ ಬಿಟ್ಟುಕೊಡಬೇಕು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೂ ಮೀಸಲಾತಿ, ಹಳ್ಳಿಯಲ್ಲಿ ಇರುವ ವ್ಯಕ್ತಿಗೂ ಮೀಸಲಾತಿ ಇದೆ. ಮುಂದಾದರೂ ಉಳ್ಳುವರು ಇಲ್ಲದವರಿಗೆ ಬಿಡಬೇಕು ಎಂದರು.