ಮಂಗಳೂರು: ಜನಪದ ಕ್ರೀಡೆ ಕಂಬಳದ ಓಟಗಾರರು ನಿರಂತರ ಹೊಸ ದಾಖಲೆ ನಿರ್ಮಿಸುತ್ತಿರುವುದು ಕರಾವಳಿಗೆ ಅಭಿಮಾನದ ವಿಷಯ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ಐಕಳ ಕಂಬಳದಲ್ಲಿ 100 ಮೀ.ದೂರವನ್ನು 9.15 ಸೆಕೆಂಡುಗಳಲ್ಲಿ ಓಡಿ ದಾಖಲೆ ನಿರ್ಮಿಸಿದ ಕಂಬಳ ಓಟಗಾರ ಬೈಂದೂರಿನ ವಿಶ್ವನಾಥ ದೇವಾಡಿಗ ಅವರನ್ನು ಎಸ್‌ಸಿಡಿಸಿಸಿ ಬ್ಯಾಂಕ್ ವತಿಯಿಂದ ಶುಕ್ರವಾರ ಬ್ಯಾಂಕ್ ಪ್ರಧಾನ ಕಚೇರಿ ಸಭಾಂಗಣದಲ್ಲಿ ಅವರು ಸನ್ಮಾನಿಸಿ ಮಾತನಾಡಿದರು.
ಎಸ್‌ಸಿಡಿಸಿಸಿ ಬ್ಯಾಂಕ್ ಹಿಂದಿನಿಂದಲೂ ಕೃಷಿ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದೆ. 17 ವರ್ಷಗಳಿಂದ ಮಿಯಾರು ಕಂಬಳವನ್ನು ಪೋಷಿಸಲಾಗುತ್ತಿದೆ. 7 ವರ್ಷಗಳಿಂದ ಐಕಳ ಕಂಬಳದ ಗೌರವಾಧ್ಯಕ್ಷನಾಗಿದ್ದೇನೆ. ಕಳೆದ ಬಾರಿ ಶ್ರೀನಿವಾಸ ಗೌಡ, ಈ ಬಾರಿ ವಿಶ್ವನಾಥ ದೇವಾಡಿಗ ದಾಖಲೆ ಮಾಡಿದ್ದಾರೆ. ಕಂಬಳ ಅಕಾಡೆಮಿಯಿಂದ ದೊರೆತ ತರಬೇತಿಯೂ ಈ ಓಟಗಾರರ ಸಾಧನೆಗಳಿಗೆ ಪೂರಕ ಎಂದರು.
ವಿಶ್ವನಾಥ ದೇವಾಡಿಗರ ದಾಖಲೆಯನ್ನು ಭವಿಷ್ಯದಲ್ಲಿ ಮುರಿಯುವುದು ಸುಲಭವಲ್ಲ ಎಂದು ಕಂಬಳ ಅಕಾಡೆಮಿ ಸಂಚಾಲಕ ಗುಣಪಾಲ ಕಡಂಬ ಹೇಳಿದರು. ಎಸ್‌ಸಿಡಿಸಿಸಿ ಬ್ಯಾಂಕ್ ಸಿಇಒ ರವೀಂದ್ರ ಬಿ, ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ ಪಿ.ಆರ್.ಶೆಟ್ಟಿ, ಕೆಎಂಎಫ್ ಉಪಾಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ತೀರ್ಪುಗಾರ ವಿಜಯ ಕುಮಾರ್, ಸಂಪ್ರದಾಯಿಕ ಕಂಬಳ ಕೂಟದ ಅಧ್ಯಕ್ಷ ವೆಂಕಟ ಪೂಜಾರಿ, ಬೋಳದ ಗುತ್ತಿನ ಯಜಮಾನ ಸಂತೋಷ್ ಶೆಟ್ಟಿ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ಬಾಲ್ಯೊಟ್ಟು ಉಪಸ್ಥಿತರಿದ್ದರು. ಐಕಳ ಕಂಬಳ ಸಮಿತಿ ಅಧ್ಯಕ್ಷ, ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಡಾ.ದೇವಿಪ್ರಸಾದ್ ಶೆಟ್ಟಿ ಬೆಳಪು ಸ್ವಾಗತಿಸಿದರು. 25 ಸಾವಿರ ರೂ.ನಗದು ಸಹಿತ ವಿಶ್ವನಾಥ ದೇವಾಡಿಗ ಅವರನ್ನು ಡಾ.ಎಂ.ಎನ್.ರಾಜೇಂದ್ರ ಕುಮಾರ್ ಸನ್ಮಾನಿಸಿದರು.