ಮಡಿಕೇರಿ: ಸೋಮನಾಥಪುರ ದೇವಾಲಯ ಸೇರಿದಂತೆ ವಿವಿಧ ದೇವಾಲಯ ಹಾಗೂ ಮೂರ್ತಿ/ ಪ್ರತಿಮೆಗಳ ಕೆತ್ತನೆಯಲ್ಲಿ ವಿಶ್ವಕರ್ಮ ಸಮಾಜದವರ ಕೊಡುಗೆ ಅಪಾರ ಎಂದು ಸಾಹಿತಿ ಡಾ.ಜೆ.ಸೋಮಣ್ಣ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆದ ಶ್ರೀ ಭಗವಾನ್ ವಿಶ್ವಕರ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಸಂಸ್ಕೃತಿ, ಆಚಾರ-ವಿಚಾರದಲ್ಲಿ ಹಾಗೂ ಕುಲಕಸುಬುನಲ್ಲಿ ವಿಶ್ವಕರ್ಮ ಸಮಾಜದವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ ಎಂದು ಸೋಮಣ್ಣ ಹೇಳಿದರು.
ಎಂಜಿನಿಯರ್‌ಗಳ ರೀತಿಯಲ್ಲಿ ವಿಶ್ವಕರ್ಮರು ಮರ, ಚಿನ್ನ ಕೆತ್ತನೆ, ಕಬ್ಬಿಣ ಕೆಲಸ ಹೀಗೆ ಹಲವು ರೀತಿಯ ವೃತ್ತಿ ಕೌಶಲ್ಯದಲ್ಲಿ ತೊಡಗಿಸಿಕೊಂಡು ಕಾಯಕವೇ ಕೈಲಾಸ ಎಂಬಂತೆ ವೃತ್ತಿಯನ್ನೇ ಕುಲಕಸುಬನ್ನಾಗಿ ಮಾಡಿಕೊಂಡು ಮುನ್ನಡೆಯುತ್ತಾರೆ. ಪ್ರಾಚೀನ ಕಾಲದಲ್ಲಿ ದೇವಾನುದೇವತೆಗಳ ಸೃಷ್ಠಿಕರ್ತರು ವಿಶ್ವಕರ್ಮರಾಗಿದ್ದಾರೆ. ಸಿಂಧೂ ಬಯಲಿನ ನಾಗರಿಕತೆಯಂತೆ ದೇಶದಲ್ಲಿ ಹಲವು ಅಭಿವೃದ್ಧಿಗೆ ವಿಶ್ವಕರ್ಮರ ಕೊಡುಗೆ ಅಪಾರವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಯಾವುದೇ ಗೃಹ ನಿರ್ಮಾಣ ಸೇರಿದಂತೆ ಹಲವು ಕಟ್ಟಡ ಕೆಲಸಗಳು, ಮರಗೆಲಸ, ಉಳುಮೆ ಮಾಡುವ ಕೆಲಸದ ಉಪಕರಣಗಳನ್ನು ವಿಶ್ವಕರ್ಮರು ತಯಾರು ಮಾಡುತ್ತಾರೆ. ಆ ನಿಟ್ಟಿನಲ್ಲಿ ದೇಶಕ್ಕೆ ವಿಶ್ವಕರ್ಮ ಸಮಾಜದವರ ಕೊಡುಗೆ ಅಪಾರವಾಗಿದೆ. ರಾಷ್ಟ್ರದ ಅಭಿವೃದ್ಧಿ ಹಾಗೂ ಕೈಗಾರಿಕೆಗಳ ಬೆಳವಣಿಗೆಯಲ್ಲಿ ವಿಶ್ವಕರ್ಮ ಸಮಾಜದವರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ ಎಂದು ವಿವರಿಸಿದರು.
ವಿಶ್ವಕರ್ಮ ಒಕ್ಕೂಟದ ಜಿಲ್ಲಾಧ್ಯಕ್ಷ ಎಸ್.ಜೆ.ದೇವದಾಸ್ ಮಾತನಾಡಿ, ವಿಶ್ವಕರ್ಮ ಸಮಾಜಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಹಲವು ವರ್ಷಗಳಿಂದ ಮನವಿ ಮಾಡುತ್ತಾ ಬರಲಾಗಿದೆ. ಆ ನಿಟ್ಟಿನಲ್ಲಿ ಈ ವರ್ಷವಾದರೂ ಈಡೇರಿಸುವಂತಾಗಬೇಕು. ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ನಿವೇಶನ ಒದಗಿಸಿದಲ್ಲಿ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು. ಆ ನಿಟ್ಟಿನಲ್ಲಿ ಈಗಾಗಲೇ ಗುರುತಿಸಲಾಗಿರುವ ಜಾಗವನ್ನು ವಿಶ್ವಕರ್ಮ ಸಮಾಜಕ್ಕೆ ಒದಗಿಸುವಂತಾಗಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಕೋರನ ಸರಸ್ವತಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪ ನಿರ್ದೇಶಕ ಸಿ.ರಂಗಧಾಮಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ದೊಡ್ಡೆಗೌಡ, ವಿಶ್ವಕರ್ಮ ಸಮಾಜ ಸೇವಾ ಸಂಘದ ತಾಲೂಕು ಘಟಕದ ಅಧ್ಯಕ್ಷ ಜಿ.ಜಗದೀಶ್ ಆಚಾರ್ಯ, ಪ್ರಮುಖರಾದ ಪ್ರಕಾಶ್ ಆಚಾರ್ಯ, ಅಶೋಕ್ ಆಚಾರ್, ನಾಗರಾಜ ಆಚಾರ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ವಿಶಾಲ್ ಕುಮಾರ್, ಇತರರು ಇದ್ದರು.