ಜಿಲ್ಲೆ

ವಾಸ್ತುಶಿಲ್ಪ ಕ್ಷೇತ್ರಕ್ಕೆ ವಿಶ್ವಕರ್ಮ ಸಮಾಜದ ಕೊಡುಗೆ ಅಪಾರ

ಅರಕಲಗೂಡು: ಭಾರತೀಯ ವಾಸ್ತುಶಿಲ್ಪ ವೈಭವಕ್ಕೆ ವಿಶ್ವಕರ್ಮ ಸಮಾಜ ಅನಾದಿ ಕಾಲದಿಂದಲೂ ದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ಎ. ಮಂಜು ಹೇಳಿದರು.

ಪಟ್ಟಣದ ಡಿ.ದೇವರಾಜಅರಸು ಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಶ್ರೀ ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ದೇವಾನುದೇವತೆಗಳ ಹಾಗೂ ಐತಿಹಾಸಿಕ ದೇವಾಲಯಗಳ ನಿರ್ಮಾಣದಲ್ಲಿ ಯೋಚನಾಲಹರಿ ಕಲ್ಪನಾಶಕ್ತಿ ಅತ್ಯದ್ಭುವಾಗಿದೆ ಎಂದರು.

ಸರ್ಕಾರ ಸಮುದಾಯದ ಉನ್ನತಿಗೆ ಅನೇಕ ಸವಲತ್ತುಗಳನ್ನು ಒದಗಿಸುತ್ತಿದ್ದು ಸದುಪಯೋಗ ಪಡಿಸಿಕೊಳ್ಳಬೇಕು. ಸರ್ಕಾರದಿಂದ ಸಮುದಾಯದ ಕಟ್ಟಡಕ್ಕೆ ನಿವೇಶನ ಹಾಗೂ ಪ್ರಮುಖ ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರಿ ಹೆಸರಿಡಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಸಂತೋಷ್ ಮಾತನಾಡಿ, ಇಂದಿನ ಆಧುನಿಕತೆ ಭರಾಟೆಯಲ್ಲಿ ಸಮುದಾಯದ ಕುಲ ಕಸುಬಿಗೆ ಹೊಡೆತ ಬಿದ್ದಿದ್ದು, ಸರ್ಕಾರ ಎಚ್ಚೆತ್ತು ಸಮಾಜದ ಏಳಿಗೆಗೆ ಗಮನಹರಿಸಬೇಕು ಎಂದು ಮನವಿ ಮಾಡಿದರು.

ತಹಸೀಲ್ದಾರ್ ಮಲ್ಲಿಕಾರ್ಜುನ್, ತಾಲೂಕು ಆರೋಗ್ಯಾಧಿಕಾರಿ ಡಾ.ಪುಷ್ಪಲತಾ ಮಾತನಾಡಿದರು. ತಾಲೂಕು ಕಚೇರಿ ಶಿರಸ್ತೇದಾರ್ ಸಿ. ಸ್ವಾಮಿ, ಕಾರ್ಮಿಕ ಇಲಾಖೆ ಅಧಿಕಾರಿ ರಘು, ಉಪ ನೋಂದಣಾಧಿಕಾರಿ ಸೋಮಶೇಖರ್, ಶಿಕ್ಷಣ ಸಂಯೋಜಕ ಬಾಲರಾಜ್, ಜಿಲ್ಲಾ ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ರಾಘವಾಚಾರ್, ರಾಮನಾಥಪುರ ಹೋಬಳಿ ಸಂಘದ ಅಧ್ಯಕ್ಷ ಗೋವಿಂದಣ್ಣ, ಮುಖಂಡ ಮಂಜುನಾಥ್, ಕೃಷ್ಣ ಇತರರಿದ್ದರು.